ಕೊರೋನ ಸೋಂಕಿನ ಸಂಖ್ಯೆ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ವಹಿಸಿ: ಉಸ್ತುವಾರಿ ಸಚಿವರಿಗೆ ಸಿಎಂ ಬಿಎಸ್‌ವೈ ಖಡಕ್ ಸೂಚನೆ

Update: 2020-07-22 15:52 GMT

ಬೆಂಗಳೂರು, ಜು. 22: ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಮ್ಮ ವಲಯಗಳ ಪ್ರಗತಿ ಬಗ್ಗೆ ಪ್ರತೀ ವಾರ ನನಗೆ ಮಾಹಿತಿ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ವಲಯಗಳ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳಿಗೆ ನಿಗದಿತ ಗುರಿ ನೀಡಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕುಂಟುನೆಪ ಹೇಳಿ ಕೆಲಸಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಸೋಂಕಿತರ ಸಂಖ್ಯೆ ಅತಿಹೆಚ್ಚು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಾರಿಗೆ ತಂದಿದ್ದ ಒಂದು ವಾರದ ಲಾಕ್‍ಡೌನ್ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಹಾಗೂ ಜನರಿಗೆ ಸಕಾಲದಲ್ಲಿ ಚಿಕಿತ್ಸಾ ಸೌಲಭ್ಯಗಳು ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುವುದು, ಸೋಂಕಿತರ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವುದು ಮತ್ತು ಕಂಟೈನ್ಮೆಂಟ್ ಝೋನ್‍ಗಳಲ್ಲಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ. ಕೋವಿಡ್ ಸೋಂಕಿನ ಪರೀಕ್ಷೆಯ ಫಲಿತಾಂಶ ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಸೋಂಕಿನ ಲಕ್ಷಣ ಇರುವವರ ಮತ್ತು ಸೋಂಕಿನ ಲಕ್ಷಣ ಇಲ್ಲದವರ ಪರೀಕ್ಷೆಯನ್ನು ವರ್ಗಿಕರಿಸಿ, ಚಿಕಿತ್ಸೆ ಅಗತ್ಯವಿರುವವರಿಗೆ ಬೇಗನೆ ಫಲಿತಾಂಶ ದೊರೆಯುವಂತೆ ಮಾಡುವುದು ನಿಮ್ಮ ಮೊದಲ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರೋಗ ಲಕ್ಷಣ ಇಲ್ಲದ, ಯಾವುದೇ ಇತರ ಕಾಯಿಲೆಗಳಿಲ್ಲದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ, ಅನಗತ್ಯ ದಟ್ಟಣೆ ಉಂಟು ಮಾಡಬೇಡಿ. ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು, ಚಿಕಿತ್ಸೆಯ ಅಗತ್ಯವಿರುವವರಿಗೆ ಕೂಡಲೇ ಸಿಗುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.

ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ವರ್ಗಾಯಿಸಲು ಕ್ರಮ ವಹಿಸಿ. ಆ ಮೂಲಕ ಸೋಂಕು ಇನ್ನಷ್ಟು ಹರಡುವ ಸಾಧ್ಯತೆಗಳನ್ನು ತಪ್ಪಿಸಿ. ಅಲ್ಲದೆ, ಜನರಲ್ಲಿ ಆತಂಕ ಉಂಟಾಗದಂತೆ ಎಚ್ಚರ ವಹಿಸಬೇಕು. ಗಂಭೀರ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ತರಬೇತಿ ಹೊಂದಿದ ವೈದ್ಯರಿಂದ ಚಿಕಿತ್ಸೆ ದೊರೆಯುವುದನ್ನು ಖಾತರಿ ಪಡಿಸಿ, ಆ ಮೂಲಕ ಸಾವಿನ ಸಂಖ್ಯೆ ಕಡಿಮೆಗೊಳಿಸಬೇಕು ಎಂದು ನಿರ್ದೆಶನ ನೀಡಿದರು.

ರೋಗ ಲಕ್ಷಣ ಇರುವವರಿಗೆ ಕೂಡಲೇ ಚಿಕಿತ್ಸೆ ನೀಡುವುದು ಹಾಗೂ ಸೋಂಕಿತರ ಪ್ರಾಣ ಉಳಿಸುವುದು ನಿಮ್ಮ ಮೊದಲ ಆದ್ಯ ಕರ್ತವ್ಯವಾಗಬೇಕಿದೆ. ಜೊತೆಗೆ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ಪರಿಣಾಮಕಾರಿಯಾಗಿಸಿ, ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಎಚ್ಚರ ವಹಿಸಬೇಕು. ಸಂಪರ್ಕಿತರು ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತರಿ ಪಡಿಸಿಕೊಳ್ಳಿ. ಪ್ರತಿನಿತ್ಯ ಅವರ ಮನೆಗೆ ಭೇಟಿ ನೀಡಿ ಅವರ ಸ್ಥಿತಿ ಗತಿಗಳನ್ನು ವಿಚಾರಸಬೇಕು. ಕೋವಿಡ್ ಆಸ್ಪತ್ರೆಗಳ ನಿರ್ವಹಣೆ, ಆಹಾರ ಪೂರೈಕೆ, ಸ್ವಚ್ಛತೆ, ಚಿಕಿತ್ಸೆ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಗಮನ ಕೊಡಬೇಕು ಎಂದರು.

ಯಾವುದೇ ದೂರುಗಳಿಗೆ ಆಸ್ಪದ ಕೊಡಬಾರದು. ದೂರುಗಳು ಬಂದರೆ ಅದಕ್ಕೆ ತಕ್ಷಣ ಸ್ಪಂದಿಸಬೇಕು. ಸೋಂಕಿತರು ಯಾವುದೇ ಆಸ್ಪತ್ರೆಗೆ ಬಂದರು ಮೊದಲು ಅವರನ್ನು ದಾಖಲು ಮಾಡಿಕೊಂಡು ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು ಎಂದು ಸೂಚಿಸಲಾಗಿದೆ. ನಂತರ ಸೋಂಕಿತನ ಸ್ಥಿತಿಗತಿ ನೋಡಿಕೊಂಡು ಇತರೆ ಆಸ್ಪತ್ರೆಗೆ ಸೇರಿಸವ ಕೆಲಸ ಮಾಡಬೇಕು. ಸರಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ. ಲೋಪಗಳು ಗಮನಕ್ಕೆ ಬಂದ ಕೂಡಲೇ ಅವುಗಳನ್ನು ಸರಿಪಡಿಸುವ ಕೆಲಸವನ್ನು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಮಾಡಬೇಕೆಂದು ಹೇಳಿದರು.

ಹಾಸಿಗೆ ಹಂಚಿಕೆಗೆ ಪಾರದರ್ಶಕ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿಗೆ ಕರೆ ಬಂದ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕಿದೆ. ಸೋಂಕಿತರು ಯಾವ ವಿಷಯಕ್ಕೆ ಯಾವ ಸಹಾಯವಾಣಿಗೆ ಕರೆಮಾಡಬೇಕೆಂಬ ಬಗ್ಗೆ ಜಾಹೀರಾತು ನೀಡಬೇಕು. ಸೋಂಕು ತಗಲಿರುವುದು ದೃಢಪಟ್ಟ ಕೂಡಲೇ ಆಂಬ್ಯುಲೆನ್ಸ್ ಬರುವುದು ವಿಳಂಬವಾದಲ್ಲಿ ಅಥವಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾಕಾರಣ ನಿರಾಕರಿಸಿದಲ್ಲಿ ಅಧಿಕಾರಿಗಳು ನಿಯಮಾನುಸಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ನಿಮ್ಮ ವಲಯಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಆದ್ಯತೆ ನೀಡಿ. ಕೋವಿಡ್ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳು ಸರಿ ಇವೆಯೇ ಎಂದು ಪರಿಶೀಲಿಸಿ. ಲೋಪಗಳನ್ನು ಸರಿಪಡಿಸಬೇಕು. ವಲಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿನಿತ್ಯ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಬೇಕು. ಹೆಚ್ಚು ಹೆಚ್ಚು ಪರೀಕ್ಷೆ ಮಾಡಿ. 24 ಗಂಟೆಯೊಳಗೆ ವರದಿ ಬರುವಂತೆ ಮಾಡಿ. ವಾರ್ಡ್ ಗಳಲ್ಲಿ ಕೋವಿಡ್-19 ಬಗ್ಗೆ ಮಾಹಿತಿ ನೀಡುವ ಜಾಹೀರಾತು ಫಲಕಗಳನ್ನು ಹಾಕಿ'

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News