ಎಚ್-1ಬಿ ವೀಸಾ ಸ್ಥಗಿತ: ಟ್ರಂಪ್ ಸರಕಾರದ ವಿರುದ್ಧ ಉದ್ಯಮಗಳು ನ್ಯಾಯಾಲಯಕ್ಕೆ

Update: 2020-07-22 16:06 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜು. 22: ಎಚ್-1ಬಿ ವೀಸಾಗಳ ಸ್ಥಗಿತ ಸೇರಿದಂತೆ ವಲಸೆ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಅಮೆರಿಕದ ಹಲವಾರು ಬೃಹತ್ ಉದ್ಯಮ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಆಂತರಿಕ ಭದ್ರತಾ ಇಲಾಖೆ ಮತ್ತು ವಿದೇಶಾಂಗ ಇಲಾಖೆಯ ವಿರುದ್ಧ ಸ್ಯಾನ್‌ಫ್ರಾನ್ಸಿಸ್ಕೊದ ಫೆಡರಲ್ ನ್ಯಾಯಾಲಯದಲ್ಲಿ ಮಂಗಳವಾರ ಮೊಕದ್ದಮೆ ದಾಖಲಾಗಿದೆ.

ಹಲವಾರು ಉದ್ಯೋಗ-ಆಧರಿತ ವೀಸಾಗಳ ವಿತರಣೆಗೆ ತಾತ್ಕಾಲಿಕ ತಡೆ ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ತನ್ನ ಅಧಿಕಾರವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಮೊಕದ್ದಮೆ ಆರೋಪಿಸಿದೆ. ಇದರಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಬಯಸಿರುವ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ ಎಂದು ಅದು ಹೇಳಿದೆ.

ಈ ಕಾನೂನುಬಾಹಿರ ವಲಸೆ ನಿರ್ಬಂಧಗಳು ಎಂಜಿನಿಯರ್‌ಗಳು, ಮಾಹಿತಿ ತಂತ್ರಜ್ಞಾನ ಪರಿಣತರು, ವೈದ್ಯರು, ನರ್ಸ್‌ಗಳು ಹಾಗೂ ಅಮೆರಿಕದ ಆರ್ಥಿಕತೆಯ ಉನ್ನತಿಗಾಗಿ ಕೆಲಸ ಮಾಡುವ ಇತರ ಮಹತ್ವದ ಕೆಲಸಗಾರರಿಗೆ ‘ನೀವು ಬರಬೇಡಿ’ ಎಂದು ನೇರವಾಗಿ ಹೇಳಿದಂತಾಗಿದೆ; ಹಾಗಾಗಿ, ಈ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂಬುದಾಗಿ ದೂರದಾರರು ತಮ್ಮ ಅರ್ಜಿಯಲ್ಲಿ ನ್ಯಾಯಾಲಯವನ್ನು ವಿನಂತಿಸಿದ್ದಾರೆ ಎಂದು ಯುಎಸ್ ಚೇಂಬರ್ ಆಫ್ ಕಾಮರ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಥಾಮಸ್ ಡೋನೋಹ್ವೆ ‘ಬ್ಲೂಮ್‌ಬರ್ಗ್’ಗೆ ಮಾಧ್ಯಮಕ್ಕೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯುಎಸ್ ಚೇಂಬರ್ ಆಫ್ ಕಾಮರ್ಸ್, ನ್ಯಾಶನಲ್ ಅಸೋಸಿಯೇಶನ್ ಆಫ್ ಮ್ಯಾನುಫ್ಯಾಕ್ಚರರ್ಸ್‌ ಮತ್ತು ನ್ಯಾಶನಲ್ ರಿಟೇಲ್ ಫೆಡರೇಶನ್ ಮುಂತಾದ ಗುಂಪುಗಳು ದೂರುದಾರರಲ್ಲಿ ಸೇರಿವೆ.

‘‘ದೇಶದ ಆರ್ಥಿಕ ಚೇತರಿಕೆ ಮತ್ತು ನವೀಕರಣದಲ್ಲಿ ನಮ್ಮ ಉದ್ಯಮಗಳು ಮುಂದಾಳುತ್ವ ವಹಿಸಬೇಕಾಗಿವೆ. ಆದರೆ ಈ ವೀಸಾ ನಿರ್ಬಂಧಗಳು ಇತರ ದೇಶಗಳಿಗೆ ಸ್ಪರ್ಧಾತ್ಮಕ ಲಾಭವನ್ನು ಒದಗಿಸಿವೆ. ಯಾಕೆಂದರೆ, ಈ ನಿಯಮಗಳು ಪ್ರತಿಭಾವಂತರನ್ನು ಅಮೆರಿಕದಿಂದ ಹೊರಗೆ ಅಟ್ಟುತ್ತವೆ’’ ಎಂದು ಎನ್‌ಎಎಮ್ ಹಿರಿಯ ಉಪಾಧ್ಯಕ್ಷೆ ಹಾಗೂ ಜನರಲ್ ಕೌನ್ಸೆಲ್ ಲಿಂಡಾ ಕೆಲ್ಲಿ ಹೇಳಿದರು.

ಟ್ರಂಪ್‌ರ ಜೂನ್ 22ರ ಆದೇಶವು ಎಚ್-1ಬಿ ಸೇರಿದಂತೆ ಉದ್ಯೋಗ ವೀಸಾಗಳನ್ನು ಈ ವರ್ಷದ ಕೊನೆಯವರೆಗೆ ವಿತರಿಸುವುದನ್ನು ನಿಷೇಧಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News