ಕೋವಿಡ್‍ಯೇತರ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಲು ಎಐಎಂಎಸ್‍ಎಸ್ ಆಗ್ರಹ

Update: 2020-07-22 18:46 GMT

ಬೆಂಗಳೂರು, ಜು. 22: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಸೇರಿದಂತೆ ಇನ್ನಿತರ ರೋಗಗಳಿಂದ ಬಳಲುತ್ತಿರುವವರಿಗೆ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಕಲ್ಪಿಸಲು ರಾಜ್ಯ ಸರಕಾರ ಆಸ್ಥೆ ವಹಿಸಬೇಕೆಂದು ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಎಐಎಂಎಸ್‍ಎಸ್ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಪ್ರದರ್ಶನ ನಡೆಸಿದರು.

ಬುಧವಾರ ಆನಂದ ರಾವ್ ವೃತ್ತದಲ್ಲಿನ ಆಯುಕ್ತರ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಿದ ಎಐಎಂಎಸ್‍ಎಸ್ ಕಾರ್ಯಕರ್ತೆಯರು, ಕೋವಿಡ್ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಆಸ್ಪತ್ರೆಗಳು ಕೊರೋನ ಸೋಂಕಿತರ ಚಿಕಿತ್ಸೆಗೆ ಸೀಮಿತಗೊಳಿಸಲಾಗಿದೆ. ಇದರಿಂದ ಇತರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಆಟೋ ರಿಕ್ಷಾಗಳಲ್ಲಿ, ಕಾರುಗಳಲ್ಲಿ ಮತ್ತು ರಸ್ತೆಗಳಲ್ಲಿ ಗರ್ಭಿಣಿ ಮಹಿಳೆಯರ ಹೆರಿಗೆ ಮತ್ತು ಶಿಶು ಮರಣಗಳು ಸಂಭವಿಸುತ್ತಿವೆ. ಹೀಗಾಗಿ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಎಲ್ಲ ರೋಗಿಗಳಿಗೂ ಚಿಕಿತ್ಸೆ ಒದಗಿಸಲು ಮುಂದಾಗಬೇಕು. ಕೋವಿಡ್ ನೆಪದಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನಿರಾಕರಣೆ ಸರಿಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯ ಸರಕಾರ ಆಯವ್ಯಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಮೀಸಲಿಡಬೇಕು. ಜನ ಸಾಮಾನ್ಯರಿಗೆ ಆರೋಗ್ಯವನ್ನು ಖಾತ್ರಿಪಡಿಸಲು ಹೆಚ್ಚು ಸರಕಾರಿ ಆಸ್ಪತ್ರೆಗಳನ್ನು ತೆರೆಯಬೇಕು. ಕೋವಿಡ್-19ಯೇತರ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಕಾರ್ಯದರ್ಶಿ ಎ.ಶಾಂತಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News