4,500ಕ್ಕೂ ಅಧಿಕ ಜನರ ಹುಡುಕಾಟದಲ್ಲಿದೆ ಬಿಬಿಎಂಪಿ: ಪಾಲಿಕೆಗೆ ತಲೆ ನೋವು ತಂದಿಟ್ಟ ಇವರು ಮಾಡಿದ್ದೇನು ಗೊತ್ತೇ ?

Update: 2020-07-23 17:00 GMT

ಬೆಂಗಳೂರು, ಜು.23: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಪರೀಕ್ಷೆ ಮಾಡಿಸಿಕೊಂಡಿರುವ 4,500ಕ್ಕೂ ಅಧಿಕ ಜನರು ತಪ್ಪು ವಿಳಾಸ ಮತ್ತು ಚಾಲನೆ ಇಲ್ಲದ ಮೊಬೈಲ್ ನಂಬರ್ ನೀಡಿದ್ದು, ಇವರ ಪತ್ತೆ ಕಾರ್ಯ ಬಿಬಿಎಂಪಿಗೆ ದೊಡ್ಡ ತಲೆ ನೋವಾಗಿ ಸಂಭವಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 37 ಸಾವಿರಕ್ಕೂ ಅಧಿಕ ಮಂದಿ ಕೊರೋನ ಸೋಂಕಿತರಿದ್ದು, ಇದರಲ್ಲಿ ಸುಮಾರು 4,500 ಸೋಂಕಿತರು ತಪ್ಪು ಮಾಹಿತಿ ನೀಡಿ ಸಂಪರ್ಕ ಮಾಡಲು ಸಾಧ್ಯವಾಗದಂತೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

ಕಳೆದ 20 ದಿನಗಳಿಂದ ಪ್ರತಿನಿತ್ಯ 1 ರಿಂದ 2 ಸಾವಿರ ಹೊಸ ಕೊರೋನ ಸೋಂಕಿತರು ಪತ್ತೆಯಾಗುತ್ತಿದ್ದು, ಸೋಂಕು ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ 6 ಸಾವಿರಕ್ಕೂ ಹೆಚ್ಚು ಸೋಂಕು ಪರೀಕ್ಷೆ ಮಾಡಲಾಗುತ್ತಿದ್ದು, ಅವರ ಮೊಬೈಲ್ ನಂಬರ್ ಮತ್ತು ವಿಳಾಸ ಪಡೆಯಲಾಗುತ್ತಿದೆ. ಆದರೆ, ಸೋಂಕು ಪರೀಕ್ಷೆಗೆ ಒಳಗಾದವರಲ್ಲಿ ಕೆಲವರು ಚಾಲನೆ ಇರದ ಮೊಬೈಲ್ ನಂಬರ್, ಕರೆನ್ಸಿ ಇಲ್ಲದೆ ಒಳಬರುವ ಕರೆ ನಿಷೇಧಿಸಲಾಗಿರುವ, ವ್ಯಾಪ್ತಿ ಪ್ರದೇಶಕ್ಕೆ ಸಿಗದ ಹಾಗೂ ಬೇರೊಬ್ಬರ ನಂಬರ್ ಕೊಟ್ಟಿದ್ದಾರೆ. ಇನ್ನು ಕೆಲವರು ಕರೆ ಸ್ವೀಕರಿಸುವುದಿಲ್ಲ. ಬಹುತೇಕರು ಮನೆ ತಪ್ಪು ವಿಳಾಸ ಕೊಟ್ಟು ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಮುದಾಯಕ್ಕೆ ಸೋಂಕು ಹರಡುವ ಆತಂಕ

ಕೊರೋನ ಸೋಂಕು ದೃಢಪಟ್ಟವರು ಅಧಿಕಾರಿಗಳಿಗೆ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ಬಿಬಿಎಂಪಿ ಮತ್ತು ಅರೋಗ್ಯ ಇಲಾಖೆಯ ಸೋಂಕು ನಿಯಂತ್ರಣ ಕಾರ್ಯಕ್ಕೆ ಅಡ್ಡಿಯಾಗಿರುವುದಲ್ಲದೆ, ಸೋಂಕಿತರ ಎಲ್ಲೆಡೆ ಸಂಚಾರದಿಂದ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಸೋಂಕಿತರ ಪತ್ತೆಗೆ ಡಿಸಿಪಿ ತಂಡ ರಚನೆ

ಕೊರೋನ ಪರೀಕ್ಷೆ ವೇಳೆ ತಪ್ಪು ವಿಳಾಸ ನೀಡಿದವರು, ತಪ್ಪು ಮೊಬೈಲ್ ನಂಬರ್ ನೀಡಿರುವ ಸೋಂಕಿತರನ್ನು ಪತ್ತೆ ಮಾಡಲು ಬಿಬಿಎಂಪಿಯಲ್ಲಿ ವಲಯಕ್ಕೊಬ್ಬರಂತೆ ಡಿಸಿಪಿ ನೇತೃತ್ವದ ತಂಡ ನೇಮಕ ಮಾಡಲಾಗಿದೆ. ಅವರಿಗೆ ಸೋಂಕಿತರು ನೀಡಿರುವ ಮೊಬೈಲ್ ನಂಬರ್ ಕೊಟ್ಟು, ನೆಟ್ವರ್ಕ್ ಟ್ರೇಸ್ ಮಾಡಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ನೆರವು ಪಡೆಯಲಾಗುತ್ತಿದೆ.

-ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News