ಜನರು ರಾಜಭವನ್‍ಗೆ ಘೇರಾವ್ ಹಾಕಿದರೆ ನಾವು ಜವಾಬ್ದಾರರಲ್ಲ: ರಾಜ್ಯಪಾಲರಿಗೆ ಗೆಹ್ಲೊಟ್

Update: 2020-07-24 08:34 GMT

ಜೈಪುರ್: ವಿಧಾನಸಭಾ ಅಧಿವೇಶನ ಕರೆಯುವಂತೆ ಸತತ ಮನವಿಗಳನ್ನು ಮಾಡಿದ ಹೊರತಾಗಿಯೂ ಈ ಕುರಿತಾದ ನಿರ್ಣಯ ಕೈಗೊಳ್ಳುವಲ್ಲಿ ವಿಳಂಬಿಸುತ್ತಿರುವ ರಾಜಸ್ತಾನ ರಾಜ್ಯಪಾಲ ಕಲ್‍ ರಾಜ್ ಮಿಶ್ರಾ ಅವರನ್ನು ಟೀಕಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,  ನಾಳೆ ಜನರೇ ರಾಜ್ ಭವನ್ ಅನ್ನು ಘೇರಾವ್ ಮಾಡಿದರೆ ತಮ್ಮ ಸರಕಾರ ಅದಕ್ಕೆ ಜವಾಬ್ದಾರಿಯಲ್ಲ ಎಂದಿದ್ದಾರೆ.

ಬಂಡುಕೋರ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹಾಗೂ ಇತರ 18 ಮಂದಿ ಭಿನ್ನಮತೀಯ ಶಾಸಕರ ಅನರ್ಹತೆಯ ಕುರಿತಾದ ಪ್ರಕರಣದಲ್ಲಿ ಯಥಾಸ್ಥಿತಿ ಕಾಪಾಡುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದ ಬೆನ್ನಿಗೇ ಗೆಹ್ಲೋಟ್ ಹೇಳಿಕೆ ಬಂದಿದೆ.

“ರಾಜ್ಯಪಾಲರು ಯಾವ ಒತ್ತಡದಿಂದಾಗಿ ವಿಧಾನಸಭಾ ಅಧಿವೇಶನವನ್ನು ಕರೆಯುತ್ತಿಲ್ಲ ಎಂದು ನಮಗೆ ಅರ್ಥವಾಗುತ್ತಿಲ್ಲ” ಎಂದು ಗೆಹ್ಲೋಟ್ ಹೇಳಿದ್ದಾರೆ.

ಕೊರೋನ ವೈರಸ್ ಪರಿಸ್ಥಿತಿ ಹಾಗೂ ರಾಜ್ಯದ ರಾಜಕೀಯ ಸ್ಥಿತಿಗತಿ ಕುರಿತಾದ ಚರ್ಚೆಗಾಗಿ ವಿಧಾನಸಭಾ ಅಧಿವೇಶನ ನಡೆಯಬೇಕೆಂದು ತಾವು ಬಯಸುವುದಾಗಿ ಸೀಎಂ ಹೇಳಿದರು. “ಕಳೆದ ರಾತ್ರಿಯೇ ಈ ಕುರಿತಾದ ಆದೇಶ ಹೊರಬೀಳುವುದೆಂದು ನಿರೀಕ್ಷಿಸಿದ್ದೆ. ಆದರೆ ಇಲ್ಲಿಯ ತನಕ ಅದು ನಡೆದಿಲ್ಲ, ರಾಜ್ಯಪಾಲರು ಅಧಿವೇಶನ ಕರೆಯದೇ ಇದ್ದರೆ ನಾಳೆ ಎಲ್ಲಾ ಶಾಸಕರು ರಾಜ್ಯಪಾಲರನ್ನು ರಾಜ್ ಭವನದಲ್ಲಿ ಭೇಟಿಯಾಗಿ ಒಂದು ನಿರ್ಧಾರ ಕೈಗೊಳ್ಳುವಂತೆ ವಿನಂತಿಸಲಿದ್ದಾರೆ” ಎಂದು ಗೆಹ್ಲೋಟ್ ಹೇಳಿದ್ದಾರೆ.

ಸೋಮವಾರದಿಂದ ವಿಧಾನಸಭಾ ಅಧಿವೇಶನ ನಡೆಯಬೇಕೆಂದು ನಾವು ಬಯಸುತ್ತೇವೆ, ಅಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News