ಕೋವಿಡ್19: ಬೆಂಗಳೂರಿನಲ್ಲಿ ನಿಲ್ಲದ ಸಾವಿನ ಸರಣಿ; ಒಂದೇ ದಿನ 50 ಮಂದಿ ಮೃತ್ಯು

Update: 2020-07-24 15:28 GMT

ಬೆಂಗಳೂರು.ಜು. 24: ನಗರದಲ್ಲಿ ಶುಕ್ರವಾರ ಒಂದೇ ದಿನ 2,267 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 746 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಗರದಲ್ಲಿ ಒಟ್ಟು 41,467 ಮಂದಿಗೆ ಸೋಂಕು ಧೃಢಪಟ್ಟಿದ್ದು, ಶುಕ್ರವಾರ ಸೋಂಕಿಗೆ 50 ಮಂದಿ ಮೃತರಾಗಿದ್ದಾರೆ.

ಇಲ್ಲಿಯವರೆಗೆ ನಗರದಲ್ಲಿ 833 ಮಂದಿ ಸೋಂಕಿಗೆ ಬಲಿಯಾಗಿದ್ದು, 10,072 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 30,561 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 38,433 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ವಿಮೆ ಪಟ್ಟಿ ಬಿಡುಗಡೆ: ವಿಮೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಬಾರದು ಮತ್ತು ವಿಮೆ ಸೌಲಭ್ಯದಿಂದ ರೋಗಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಪಾಲಿಕೆ ಕೋವಿಡ್-19 ಚಿಕಿತ್ಸೆಗೆ ವಿಮಾ ಸೌಲಭ್ಯ ನೀಡುವ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಾಲಿಕೆ ಆಯುಕ್ತರಾದ ಎನ್. ಮಂಜುನಾಥ್ ಪ್ರಸಾದ್ ಈ ಕುರಿತ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಸಾಮಾನ್ಯ ಮತ್ತು ಆರೋಗ್ಯ ವಿಮಾ ಸಂಸ್ಥೆಗಳಾದ ಎಸ್ ಬಿಐ, ಅಕೊ, ಆದಿತ್ಯ ಬಿರ್ಲಾ, ಬಜಾಜ್ ಅಲಯನ್ಸ್, ಭಾರ್ತಿ ಎಎಕ್ಸ್ ಎ, ಕೊಲಮನಡಲಮ್ ಎಂಎಸ್, ಎಡೆಲ್ ವೈಸ್ಸ್, ಫ್ಯೂಚರ್, ಗೊ ಡಿಜಿಟ್, ಹೆಚ್ ಡಿಎಫ್ ಸಿ ಎರ್ಗೊ, ಐಸಿಐಸಿಐ ಲೊಂಬಾರ್ಡ್, ಐಎಫ್‍ಎಫ್ ಸಿಒ, ಟೊಕಿಯೊ, ಕೊಟಾಕ್ ಮಹೀಂದ್ರ, ಲಿಬರ್ಟಿ, ಮಗ್ಮಾ ಹೆಚ್ ಡಿಐ, ಮಣಿಪಾಲ್ ಸಿಗ್ನಾ, ಮ್ಯಾಕ್ಸ್ ಬೂಪಾ, ನವಿ, ರಹೇಜಾ ಕ್ಯುಬಿಇ, ರಿಲಯನ್ಸ್, ರೆಲಿಗರೆ, ರಾಯಲ್ ಸುಂದರಮ್, ಸ್ಟಾರ್ ಹೆಲ್ತ್ ಅಂಡ್ ಅಲ್ಲೈಡ್, ಟಾಟಾ ಎಐಜಿ, ನ್ಯೂ ಇಂಡಿಯಾ ಅಶ್ಯೂರೆನ್ಸ್, ದ ಓರಿಯೆಂಟಲ್, ಯುನೈಟೆಡ್ ಇಂಡಿಯಾ, ಯೂನಿವರ್ಸಲ್ ಸೊಂಪೊ ಕಂಪೆನಿಗಳಿವೆ.

ಕೊರೋನ ಕವಚದಡಿ ನಾಗರಿಕರಿಗೆ 50 ಸಾವಿರದಿಂದ 5 ಲಕ್ಷಗಳವರೆಗೆ ವಿಮಾ ಹಣ ಚಿಕಿತ್ಸೆಗೆ ಸಿಗಲಿದ್ದು, ಮೂರೂವರೆ ತಿಂಗಳಿನಿಂದ ಒಂಭತ್ತೂವರೆ ತಿಂಗಳವರೆಗೆ ಪಾಲಿಸಿ ಅವಧಿಯಿರುತ್ತದೆ. 18ರಿಂದ 65 ವರ್ಷದೊಳಗಿನವರು ಪಾಲಿಸಿ ಹಣವನ್ನು ಪಡೆಯಲು ಅರ್ಹರಾಗಿದ್ದು ಅವರ ಅವಲಂಬಿತರಿಗೂ ಸಹ ಸಿಗುತ್ತದೆ. ಕೋವಿಡ್-19ನಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವವರಿಗೆ ಈ ವಿಮೆ ಸೌಲಭ್ಯ ದೊರಕುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News