ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟ: ನೇಕಾರ ನೇಣು ಬಿಗಿದು ಆತ್ಮಹತ್ಯೆ

Update: 2020-07-24 15:32 GMT

ಬೆಂಗಳೂರು, ಜು.24: ಕೊರೋನ ಸೋಂಕಿನ ಪರಿಣಾಮ ಜಾರಿಗೊಳಿಸಿದ್ದ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ನೇಕಾರರೊಬ್ಬರು ಸೀರೆ ನೇಯುವ ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಅಗ್ರಹಾರ ಬಡಾವಣೆಯ ನಿವಾಸಿ 55 ವರ್ಷದ ಲಕ್ಷ್ಮೀಪತಿ ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರ ಎಂದು ಪೊಲೀಸರು ಗುರುತಿಸಿದ್ದಾರೆ.

ಕಳೆದ 25 ವರ್ಷಗಳಿಂದಲೂ ಪತ್ನಿಯೊಂದಿಗೆ ನೇಕಾರಿಕೆ ಮಾಡಿಕೊಂಡು ಲಕ್ಷ್ಮೀಪತಿ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್‍ಡೌನ್‍ನಿಂದ ದಂಪತಿಗೆ ಜೀವನ ಕೂಡಾ ದುಸ್ತರವಾಗಿತ್ತು ಎಂದು ಹೇಳಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪತ್ನಿ ಹೊರಗೆ ಹೋಗಿದ್ದಾಗ ಲಕ್ಷ್ಮೀಪತಿ ಸೀರೆ ನೇಯುವ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ನೆಟ್ಟಿಗರ ಆಕ್ರೋಶ

ಈ ಹಿಂದೆ ನೇಕಾರ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 100 ಕೋಟಿ ರೂ. ನೆರವು ಘೋಷಿಸಿದ್ದರು. ಆದರೆ, ಇದು ಸಮಪರ್ಕವಾಗಿ ನೇಕಾರರ ಕೈತಲುಪಿಲ್ಲ. ಹೀಗಾಗಿಯೇ ಲಕ್ಷ್ಮೀಪತಿ ಆತ್ಮಹತ್ಯೆಗೆ ಕಾರಣವಾಗಿದೆ. ಇನ್ನು, ಲಾಕ್‍ಡೌನ್ ಸಹ ಗುಡಿ ಕೈಗಾರಿಕೆಗಳಿಗೆ ಪೆಟ್ಟು ನೀಡಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News