ಅಮೆರಿಕದ ಚೆಂಗ್ಡು ಕೌನ್ಸುಲೇಟ್ ಕಚೇರಿ ಮುಚ್ಚುವಂತೆ ಚೀನಾ ಆದೇಶ

Update: 2020-07-24 16:36 GMT

ಬೀಜಿಂಗ್, ಜು. 24: ಚೆಂಗ್ಡು ನಗರದಲ್ಲಿರುವ ಅಮೆರಿಕ ಕೌನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ಚೀನಾ ಶುಕ್ರವಾರ ಆದೇಶ ನೀಡಿದೆ. ಅಮೆರಿಕದ ಹ್ಯೂಸ್ಟನ್ ನಗರದಲ್ಲಿರುವ ಚೀನಾದ ಕೌನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ಅಮೆರಿಕ ಮಂಗಳವಾರ ಆದೇಶ ನೀಡಿದ ಬಳಿಕ ಚೀನಾ ಈ ಪ್ರತೀಕಾರಾತ್ಮಕ ಕ್ರಮ ತೆಗೆದುಕೊಂಡಿದೆ.

‘‘ಚೆಂಗ್ಡುವಿನಲ್ಲಿರುವ ಅಮೆರಿಕ ಕೌನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ನೀಡಿರುವ ಆದೇಶವು ಅಮೆರಿಕದ ಅರ್ಥಹೀನ ಕೃತ್ಯಗಳಿಗೆ ಪ್ರತಿಯಾಗಿ ತೆಗೆದುಕೊಂಡ ಕಾನೂನುಬದ್ಧ ಹಾಗೂ ಅಗತ್ಯ ಪ್ರತಿಕ್ರಿಯೆಯಾಗಿದೆ’’ ಎಂದು ಚೀನಾ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಚೀನಾ-ಅಮೆರಿಕ ಸಂಬಂಧದ ಪ್ರಸಕ್ತ ಸ್ಥಿತಿಗತಿಯು ಚೀನಾ ಅಪೇಕ್ಷೆ ಪಡುವಂತೆ ಇಲ್ಲ ಹಾಗೂ ಇದಕ್ಕೆ ಅಮೆರಿಕವೇ ಕಾರಣ’’ ಎಂದು ಅದು ಹೇಳಿದೆ.

ಅಮೆರಿಕದ ಹ್ಯೂಸ್ಟನ್ ನಗರದಲ್ಲಿರುವ ಚೀನಾ ಕೌನ್ಸುಲೇಟ್ ಕಚೇರಿಯನ್ನು ಮುಚ್ಚುವಂತೆ ಮಂಗಳವಾರ ಅಮೆರಿಕ ನೀಡಿರುವ ಆದೇಶಕ್ಕೆ ನೇರ ಪ್ರತಿಕ್ರಿಯೆಯಾಗಿ ಅಮೆರಿಕದ ಚೆಂಗ್ಡು ಕೌನ್ಸುಲೇಟ್ ಕಚೇರಿಯನ್ನು ಮುಚ್ಚಲಾಗಿದೆ ಎಂದು ಸಚಿವಾಲಯ ಪುನರುಚ್ಚರಿಸಿದೆ.

ಚೀನಾ ಕೌನ್ಸುಲೇಟ್ ಕಚೇರಿಯು ಬೇಹುಗಾರಿಕೆ ಕೇಂದ್ರವಾಗಿತ್ತು: ಪಾಂಪಿಯೊ

ವಾಶಿಂಗ್ಟನ್, ಜು. 24: ಹ್ಯೂಸ್ಟನ್‌ನಲ್ಲಿದ್ದ ಚೀನಾದ ಕೌನ್ಸುಲೇಟ್ ಕಚೇರಿಯು ಬೇಹುಗಾರಿಕೆ ಮತ್ತು ಅಮೆರಿಕದ ಕಂಪೆನಿಗಳ ವ್ಯಾಪಾರ ರಹಸ್ಯಗಳನ್ನು ಅಕ್ರಮವಾಗಿ ಪಡೆದುಕೊಳ್ಳುವ ಕಾರ್ಯಾಚರಣೆಗಳ ಕೇಂದ್ರವಾಗಿತ್ತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಗುರುವಾರ ಆರೋಪಿಸಿದ್ದಾರೆ. ಈ ಕಚೇರಿಯನ್ನು ಮುಚ್ಚುವಂತೆ ಅಮೆರಿಕ ಮಂಗಳವಾರ ಆದೇಶ ನೀಡಿದೆ.

‘‘ಹ್ಯೂಸ್ಟನ್‌ನಲ್ಲಿರುವ ಚೀನಾದ ಕೌನ್ಸುಲೇಟ್ ಕಚೇರಿಯನ್ನು ನಾವು ಈ ವಾರ ಮುಚ್ಚಿದೆವು. ಯಾಕೆಂದರೆ ಅದು ಬೇಹುಗಾರಿಕೆ ಮತ್ತು ಬೌದ್ಧಿಕ ಆಸ್ತಿ ಕಳ್ಳತನದ ಕೇಂದ್ರವಾಗಿತ್ತು’’ ಎಂದು ಜಗತ್ತಿಗೆ ಚೀನಾದ ಬೆದರಿಕೆ ಬಗ್ಗೆ ಕ್ಯಾಲಿಫೋರ್ನಿಯದಲ್ಲಿ ಮಾಡಿದ ಭಾಷಣದಲ್ಲಿ ಪಾಂಪಿಯೊ ಹೇಳಿದರು.

‘‘ಚೀನಾ ನಮ್ಮ ಅಮೂಲ್ಯ ಬೌದ್ಧಿಕ ಆಸ್ತಿ ಮತ್ತು ವ್ಯಾಪಾರ ರಹಸ್ಯಗಳನ್ನು ಕಳ್ಳತನ ಮಾಡಿತು ಹಾಗೂ ಆ ಮೂಲಕ ಅಮೆರಿಕದಾದ್ಯಂತ ಲಕ್ಷಾಂತರ ಉದ್ಯೋಗಗಳು ನಷ್ಟವಾಗುವಂತೆ ಮಾಡಿತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News