ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಸಂದರ್ಭ ಮಾರ್ಗಸೂಚಿ ಅನುಸರಣೆ ಕಡ್ಡಾಯ: ಹೈಕೋರ್ಟ್

Update: 2020-07-24 18:00 GMT

ಮುಂಬೈ, ಜು.24: ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರ ಚಿಕಿತ್ಸೆ ಹಾಗೂ ಕ್ವಾರಂಟೈನ್ ಸಂದರ್ಭ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಂದರ್ಭ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯನ್ನು ಪಾಲಿಸುವ ಅಗತ್ಯವಿದೆ ಎಂದು ಮಹಾರಾಷ್ಟ್ರ ಸರಕಾರ ಮತ್ತು ಪೌರಾಡಳಿತಗಳಿಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ.

ಪ್ರತಿಯೊಬ್ಬ ನಾಗರಿಕನ ಜೀವನವನ್ನು ಸಂರಕ್ಷಿಸುವುದು ಹಾಗೂ ಕೊರೋನ ಸೋಂಕಿಗೆ ಇನ್ನಷ್ಟು ಜನತೆ ಬಲಿಯಾಗದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಎಂದು ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ತಿಳಿಸಿದೆ. ಅಲ್ಲದೆ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಸಂದರ್ಭ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯನ್ನು ಅನುಸರಿಸುವಂತೆ ಮಹಾರಾಷ್ಟ್ರ ಸರಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೌರಾಡಳಿತಗಳಿಗೆ ಸೂಚಿಸಿದೆ.

ಕಲ್ಯಾಣ್ ದೊಂಬಿವಲಿ ನಗರಪಾಲಿಕೆಯು ಬಳಕೆ ಮಾಡಿರುವ ಪಿಪಿಇ ಕಿಟ್ ಸಹಿತ ಆಸ್ಪತ್ರೆಗಳ ತ್ಯಾಜ್ಯಗಳನ್ನು ರಸ್ತೆ ಬದಿ ಸುರಿಯುತ್ತಿರುವ ಬಗ್ಗೆ ಆತಂಕ ಸೂಚಿಸಿ ಸ್ಥಳೀಯ ನಿವಾಸಿ ಕಿಶೋರ್ ಸೊಹೋನಿ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಯಾವುದೇ ಪೌರಾಡಳಿತವು ನಿರ್ಲಕ್ಷ್ಯ ತೋರಿದರೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News