ಆರು ನಗರಗಳಲ್ಲಿ ಕೋವಿಡ್-19 ಲಸಿಕೆ ಮಾನವ ಪ್ರಯೋಗ

Update: 2020-07-25 03:58 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.25: ನೋವೆಲ್ ಕೊರೋನ ವೈರಸ್ ವಿರುದ್ಧ ದೇಶೀಯವಾಗಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಪೈಪೋಟಿ ಏರ್ಪಟ್ಟಿದ್ದು, ಭಾರತ್ ಬಯೋಟೆಕ್ ಹಾಗೂ ಝೈದೂಸ್ ಕ್ಯಾಡಿಲಾದಿಂದ ಆರು ರಾಜ್ಯಗಳ ಆರು ನಗರಗಳಲ್ಲಿ ಮನುಷ್ಯನ ಮೇಲೆ ಲಸಿಕೆ ಪ್ರಯೋಗ ನಡೆದಿದೆ.

ದಿಲ್ಲಿಯ 30 ವರ್ಷದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಎಐಐಎಂಎಸ್‌ನಲ್ಲಿ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್‌ನ 0.5 ಮಿಲಿ ಲೀಟರ್ ಪ್ರಮಾಣವನ್ನು ಚುಚ್ಚುಮದ್ದು ರೂಪದಲ್ಲಿ ನೀಡಲಾಗಿದೆ.

ಭಾರತ್ ಬಯೋಟೆಕ್ ಮತ್ತು ಝೈದೂಸ್ ಒಂದನೇ ಹಾಗೂ ಎರಡನೇ ಹಂತದ ಪ್ರಯೋಗ ನಡೆಸಲು ಅನುಮತಿ ಪಡೆದಿದ್ದು, ಜುಲೈ 15ರಂದು ಸ್ವಯಂಸೇವಕರಿಗೆ ಈ ಲಸಿಕೆಯನ್ನು ಪ್ರಯೋಗಾತ್ಮಕವಾಗಿ ನೀಡಿದ್ದವು.

ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಭಾರತದಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಬ್ರಿಟನ್‌ನ ಆಸ್ಟ್ರಾ ಝೆನೇಕಾ ಜತೆ ಉತ್ಪಾದನೆ ಪಾಲುದಾರಿಕೆ ಹೊಂದಿರುವ ಸೆರಮ್ ಇನ್‌ಸ್ಟಿಟ್ಯೂಟ್ ಕೂಡಾ ಮಾನವನ ಮೇಲೆ ಪ್ರಯೋಗಕ್ಕೆ ಅನುಮೋದನೆ ಪಡೆದಿದೆ.

ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್, ಐಎಂಸಿಆರ್ ಮತ್ತು ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ಸಹಭಾಗಿತ್ವದಲ್ಲಿ ಸಿದ್ಧವಾಗಿದ್ದು, ದಿಲ್ಲಿಯ ಎಐಐಎಂಎಸ್, ಪಾಟ್ನಾ ಎಐಐಎಂಎಸ್, ರೋಹ್ಟಕ್ ಪಿಜಿಐ ಸೇರಿದಂತೆ 12 ನಗರಗಳ 12 ಆಸ್ಪತ್ರೆಗಳಲ್ಲಿ ಇದನ್ನು ಪ್ರಯೋಗಿಸಲಾಗುತ್ತಿದೆ. ಮೊದಲ ಹಂತದಲ್ಲಿ 18ರಿಂದ 55 ವರ್ಷ ವಯಸ್ಸಿನ, ಇತರ ರೋಗಗಳಿಲ್ಲದ 500 ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗುತ್ತದೆ.

ಝೈದೂಸ್‌ನ ಝೈಕೋವ್-ಡಿ ಉಮೇದುವಾರಿಕೆಯ ಪರೀಕ್ಷೆ ಸದ್ಯ ಅಹ್ಮದಾಬಾದ್‌ನಲ್ಲಿರುವ ಸಂಶೋಧನಾ ಕೇಂದ್ರಕ್ಕೆ ಸೀಮಿತವಾಗಿದ್ದು, ಇದನ್ನು ಇತರ ನಗರಗಳಿಗೂ ವಿಸ್ತರಿಸಲಾಗುತ್ತದೆ.

ಕೊವ್ಯಾಕ್ಸಿನ್ ಪ್ರಯೋಗ ಈಗಾಗಲೇ ಹೈದರಾಬಾದ್, ಪಾಟ್ನಾ, ಕಾಂಚಿಪುರಂ, ರೋಹ್ಟಕ್ ಹಾಗೂ ದಿಲ್ಲಿಯಲ್ಲಿ ನಡೆದಿದ್ದು, ನಾಗ್ಪುರ, ಭುವನೇಶ್ವರ, ಬೆಳಗಾವಿ, ಗೋರಖ್‌ಪುರ, ಕಾನ್ಪುರ, ಗೋವಾ ಹಾಗೂ ವಿಶಾಖಪಟ್ಟಣಂನಲ್ಲಿ ಮುಂದೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News