ಕೋವಿಡ್ ನಿಯಂತ್ರಣ: ಈ ರಾಜ್ಯದ ಮಾದರಿ ಅನುಸರಿಸಲು ಕೇಂದ್ರ ಸರಕಾರ ನಿರ್ಧಾರ

Update: 2020-07-26 04:46 GMT

ಹೊಸದಿಲ್ಲಿ, ಜು.26: ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಎಲ್ಲ ರಾಜ್ಯಗಳು ದಿಲ್ಲಿ ಮಾದರಿ ಅನುಸರಿಸುವ ಸಂಬಂಧ ಕಾರ್ಯಯೋಜನೆಯನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರ ಸೋಮವಾರ ಉನ್ನತಾಧಿಕಾರಿಗಳ ಸಭೆ ನಡೆಸಲಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ ಎಂದು ದಿಲ್ಲಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯ ಯಶಸ್ವಿ ಮಾದರಿಯನ್ನು ಎಲ್ಲ ರಾಜ್ಯಗಳಲ್ಲೂ ಅನುಸರಿಸುವ ಬಗ್ಗೆ ನಿರ್ಧರಿಸಲು ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ದಿಲ್ಲಿಯಲ್ಲಿ ಕೋವಿಡ್-19 ನಿಭಾಯಿಸುವ ಕಾರ್ಯವಿಧಾನಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಸಭೆಯ ಕಾರ್ಯಸೂಚಿಯ ಪ್ರಕಾರ, ದಿಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ್‌ದೇವ್ ಅವರು, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಎದುರು ಕೋವಿಡ್-19 ನಿಭಾಯಿಸಿದ ದಿಲ್ಲಿ ಕಾರ್ಯತಂತ್ರದ ಬಗ್ಗೆ ವಿವರ ಪ್ರಸ್ತುತಪಡಿಸುವರು. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಅವರೂ ಭಾಗವಹಿಸುವರು.

ಜುಲೈ ಆರಂಭದವರೆಗೆ ದೇಶದಲ್ಲಿ ವರದಿಯಾದ ಪ್ರತಿ ಮೂರು ಪ್ರಕರಣಗಳ ಪೈಕಿ ಎರಡು ಮಹಾರಾಷ್ಟ್ರ, ದಿಲ್ಲಿ ಹಾಗೂ ತಮಿಳುನಾಡಿನಲ್ಲಿ ದಾಖಲಾಗಿತ್ತು. ಆದರೆ ಇದೀಗ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ದಿಲ್ಲಿ ಮಾದರಿ ಅನುಸರಿಸುವಂತೆ ಸೂಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಕೋವಿಡ್ ಪರೀಕ್ಷೆ, ಮನೆಯಲ್ಲೇ ಐಸೊಲೇಶನ್, ಪಾರದರ್ಶಕ ಅಂಕಿ ಅಂಶ, ಆಸ್ಪತ್ರೆ ಬೆಡ್ ಸಂಖ್ಯೆ ಮತ್ತು ಪ್ಲಾಸ್ಮಾ ಥೆರಪಿ ದಿಲ್ಲಿ ಮಾದರಿಯ ಮುಖ್ಯಾಂಶವಾಗಿದ್ದು, ಇದನ್ನು ಸಾಧಿಸಲು ತಂಡಕಾರ್ಯ, ರಚನಾತ್ಮಕ ಟೀಕೆಗಳನ್ನು ಒಪ್ಪಿಕೊಂಡು ತಪ್ಪು ಸರಿಪಡಿಸುವುದು, ಎಷ್ಟೇ ಪ್ರಕರಣಗಳು ಬಂದರೂ ಧೃತಿಗೆಡದಿರುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News