ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನ 50 ಸಾವಿರ ದಾಟಿದ ಕೊರೋನ

Update: 2020-07-27 04:33 GMT

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರವಿವಾರ ದೇಶದಲ್ಲಿ ಒಂದೇ ದಿನ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಒಂದು ವಾರದಲ್ಲಿ 5000ಕ್ಕೂ ಹೆಚ್ಚು ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ಶುಕ್ರವಾರ ದಾಖಲಾಗಿದ್ದ 49055 ಪ್ರಕರಣಗಳ ದಾಖಲೆ ಅಳಿಸಿ ಹೋಗಿದ್ದು, ರವಿವಾರ 50362 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 14 ಲಕ್ಷ ದಾಟಿರುವುದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಒಂದು ವಾರದಲ್ಲಿ 5315 ಮಂದಿ ಸೋಂಕಿತರು ದೇಶದಲ್ಲಿ ಮೃತಪಟ್ಟಿದ್ದು, ಇದು ಹಿಂದಿನ ವಾರ ದಾಖಲಾದ 4285 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 24ರಷ್ಟು ಅಧಿಕ. ಇಡೀ ವಿಶ್ವದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಮಾತ್ರ ಇದುವರೆಗೆ ಒಂದೇ ದಿನ 50 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳನ್ನು ಕಂಡಿವೆ.

ದೆಹಲಿಯಲ್ಲಿ ಜುಲೈ ತಿಂಗಳಲ್ಲಿ ಎರಡು ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಇದು ಜೂನ್ ತಿಂಗಳಲ್ಲಿ ವರದಿಯಾದ ಪ್ರಕರಣಗಳ ಎರಡರಷ್ಟಾಗಿದೆ. ಜೂನ್ ತಿಂಗಳಲ್ಲಿ ರಾಜ್ಯದಲ್ಲಿ 1.07 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಮಹಾರಾಷ್ಟ್ರದಲ್ಲಿ ಇದುವರೆಗೆ 3,75,799 ಪ್ರಕರಣಗಳು ದೃಢಪಟ್ಟಿವೆ.

ಹಿಂದಿನ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 28ರಷ್ಟು ಹೆಚ್ಚಳವಾಗಿದ್ದು, ಒಟ್ಟು ಸಾವಿನ ಪ್ರಮಾಣ ಶೇಕಡ 19ರಷ್ಟು ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News