ನೀರಿನ ಟ್ಯಾಂಕ್‍ಗೆ ಹಾರಿ ಮಹಿಳೆ ಆತ್ಮಹತ್ಯೆ: 3 ದಿನ ಅದೇ ಟ್ಯಾಂಕ್ ನ ನೀರು ಕುಡಿದ ಅಪಾರ್ಟ್ ಮೆಂಟ್ ವಾಸಿಗಳು !

Update: 2020-07-27 11:08 GMT

ಬೆಂಗಳೂರು, ಜು.27: ನಗರದ ಅಪಾರ್ಟ್ ಮೆಂಟ್ ವೊಂದರ ಕುಡಿವ ನೀರಿನ ಟ್ಯಾಂಕಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳ ಕಾಲ ಇದೇ ಟ್ಯಾಂಕ್‍ನ ನೀರನ್ನು ಅಪಾರ್ಟ್ ಮೆಂಟ್ನಲ್ಲಿರುವ ನಿವಾಸಿಗಳು ಕುಡಿಯಲು ಬಳಕೆ ಮಾಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

ಇಲ್ಲಿನ ಯಲಹಂಕ ಉಪನಗರದ 4ನೆ ಹಂತದ ಬಳಿ ಈ ಘಟನೆ ನಡೆದಿದ್ದು, ಗೌರಿ ನಾಗರಾಜ್ ಮೃತ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಅಪಾರ್ಟ್ ಮೆಂಟ್ನಲ್ಲಿ ವಾಸ ಮಾಡುತ್ತಿದ್ದ ಗೌರಿ ನಾಗರಾಜ್, ಕಳೆದ ಜು.24ರಂದು ದಿಢೀರ್ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬದ ಸದಸ್ಯರು ಇಲ್ಲಿನ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತದನಂತರ, ಸಂಬಂಧಿಕರ ಮನೆ, ಸ್ನೇಹಿತರ ಬಳಿ ಹೋಗಿರಬಹುದೆಂದು ಶಂಕಿಸಿ ಹುಡುಕಾಟ ನಡೆಸಿದ್ದರು.

ಆದರೆ, ಸೋಮವಾರ ಅಪಾರ್ಟ್ ಮೆಂಟ್ನಲ್ಲಿರುವ ಸ್ನಾನಕ್ಕೆ ಹಾಗೂ ಕುಡಿಯುವುದಕ್ಕೆ ಬಳಕೆ ಮಾಡುವ ನೀರಿನ ಟ್ಯಾಂಕ್‍ನಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಪೊಲೀಸರಿಗೆ ವಿಚಾರ ತಿಳಿಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದಲ್ಲದೆ, ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ಸುಮಾರು 60 ಅಧಿಕ ಮಂದಿ ಅಪಾರ್ಟ್ ಮೆಂಟ್ನಲ್ಲಿ ವಾಸ ಮಾಡುತ್ತಿದ್ದು, ಕಳೆದ 3 ದಿನಗಳಿಂದ ಎಲ್ಲರೂ ಅದೇ ನೀರನ್ನು ಬಳಕೆ ಮಾಡಿರುವ ಕಾರಣ ವಿಚಲಿತರಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬಯಲಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News