ಏನೇ ಆದರೂ ಚೀನಾ ಭಾರತದ ಭೂಭಾಗ ಪ್ರವೇಶಿಸಿಲ್ಲ ಎಂಬ ಸುಳ್ಳು ಹೇಳುವುದಿಲ್ಲ: ರಾಹುಲ್

Update: 2020-07-27 16:50 GMT

ಹೊಸದಿಲ್ಲಿ, ಜು.27: “ನನ್ನ ರಾಜಕೀಯ ಜೀವನ ಅಂತ್ಯವಾದರೂ ಸರಿ, ಭಾರತದ ಪ್ರದೇಶದೊಳಗೆ ಚೀನಾದ ಸೇನೆ ಅತಿಕ್ರಮಣ ಮಾಡಿದ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಜೂನ್ 15ರಂದು ಲಡಾಖ್ ಗಡಿಭಾಗದಲ್ಲಿ ಚೀನೀ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಮೃತಪಟ್ಟ ವಿಷಯದ ಬಗ್ಗೆ ಕೇಂದ್ರ ಸರಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿರುವ ರಾಹುಲ್, ಸೋಮವಾರ ಟ್ವಿಟರ್‌ನಲ್ಲಿ ವೀಡಿಯೊ ದೃಶ್ಯವನ್ನು ಶೇರ್ ಮಾಡಿದ್ದಾರೆ. ಚೀನೀಯರು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಸತ್ಯವನ್ನು ಮರೆಮಾಚಿ, ಭೂಪ್ರದೇಶವನ್ನು ಅವರಿಗೇ ಬಿಟ್ಟುಕೊಡುವುದು ದೇಶವಿರೋಧಿಯಾಗಿದೆ. ಈ ಸತ್ಯವನ್ನು ಜನತೆಯ ಗಮನಕ್ಕೆ ತರುವುದು ದೇಶಾಭಿಮಾನವಾಗಿದೆ ಎಂದು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

“ ಓರ್ವ ಭಾರತೀಯನಾಗಿ ನನ್ನ ಮೊತ್ತಮೊದಲ ಆದ್ಯತೆ ದೇಶ ಮತ್ತು ಅದರ ಜನರಾಗಿದ್ದಾರೆ. ಚೀನಾದವರು ನಮ್ಮ ಭೂಭಾಗದೊಳಗೆ ನುಗ್ಗಿರುವುದು ಈಗ ಸ್ಪಷ್ಟವಾಗಿದೆ. ಇದರಿಂದ ನನಗೆ ನೋವಾಗಿದೆ. ನನ್ನ ರಕ್ತ ಕುದಿಯುತ್ತಿದೆ. ಬೇರೊಂದು ದೇಶ ನಮ್ಮ ಪ್ರದೇಶದೊಳಗೆ ಇಷ್ಟು ಸುಲಭವಾಗಿ ಬರಲು ಹೇಗೆ ಸಾಧ್ಯವಾಗಿದೆ ?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.

 “ಉಪಗ್ರಹ ಕಳುಹಿಸಿದ ಚಿತ್ರವನ್ನು ನಾನು ಗಮನಿಸಿದ್ದರೂ ನಾನು ಸುಮ್ಮನಿದ್ದು ಜನರಿಗೆ ಸುಳ್ಳು ಹೇಳಬೇಕು ಎಂದು ಓರ್ವ ರಾಜಕಾರಣಿಯಾಗಿ ನೀವು ಬಯಸುತ್ತೀರಿ. ಚೀನಾದವರು ನಮ್ಮ ಭೂಭಾಗ ಪ್ರವೇಶಿಸಿಲ್ಲ ಎಂದು ಸುಳ್ಳು ಹೇಳಬೇಕೆಂದು ನೀವು ಬಯಸಿದ್ದರೆ ನಾನು ಹಾಗೆ ಹೇಳುವುದಿಲ್ಲ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News