ಸೂತಕದಲ್ಲಿ ಸಂಭ್ರಮಾಚರಣೆಯೇ ಸರಕಾರದ ಸಾಧನೆ: ಡಿ.ಕೆ.ಶಿವಕುಮಾರ್

Update: 2020-07-27 12:49 GMT

ಬೆಂಗಳೂರು, ಜು.27: ಬಿಜೆಪಿ ಸರಕಾರ ಒಂದು ವರ್ಷ ಪೂರ್ಣಗೊಳಿಸಿ ಎರಡನೆ ವರ್ಷಕ್ಕೆ ಕಾಲಿಟ್ಟಿದೆ. ಅವರು ತಮ್ಮ ಸಾಧನೆ ಕುರಿತು ಬಣ್ಣ ಬಣ್ಣವಾಗಿ ಜಾಹೀರಾತು ನೀಡುತ್ತಿದ್ದಾರೆ. ಅವು ಕಿವಿಗೆ ಹಿಂಪಾಗಿದೆಯೆ ಹೊರತು ವಾಸ್ತವದಲ್ಲಿ ಅವರ ಸಾಧನೆ ಶೂನ್ಯ. ಸೂತಕದಲ್ಲಿ ಸಂಭ್ರಮಾಚರಣೆಯೆ ಈ ಸರಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸರಕಾರದ ಒಂದು ವರ್ಷದ ಆಟ ಹೇಗಿತ್ತು ಎಂದರೆ, ಮೊದಲ ತಿಂಗಳು ಮಂತ್ರಿ ಮಂಡಲವಿಲ್ಲದೇ ತಿಕ್ಕಾಟ, ಎರಡನೇ ತಿಂಗಳು ನೆರೆ ಪರಿಹಾರ ಇಲ್ಲದೇ ನರಳಾಟ, ಮೂರನೇ ತಿಂಗಳು ಉಪ ಚುನಾವಣೆ ಬಯಲಾಟ. ನಾಲ್ಕನೇ ತಿಂಗಳು ಮಂತ್ರಿಮಂಡಲ ರಚನೆ ಡೊಂಬರಾಟ ಎಂದು ವ್ಯಂಗ್ಯವಾಡಿದರು.

ಐದನೆ ತಿಂಗಳು ಮಂತ್ರಿಗಿರಿಗಾಗಿ ಕಿತ್ತಾಟ, ಏಳು-ಎಂಟನೇ ತಿಂಗಳಲ್ಲಿ ಕೊವಿಡ್- ಲಾಕ್‍ಡೌನ್ ಎಂಬ ಅಲೆದಾಟ, ಒಂಬತ್ತು-ಹತ್ತರಲ್ಲಿ ಕೊರೋನ ಕೊರೋನ ಕಿರುಚಾಟ, ಹನ್ನೊಂದು-ಹನ್ನೆರಡರಲ್ಲಿ ಲೂಟಿಯ ಆಟ ನಡೆಯಿತು. ಇದು ಈ ಸರಕಾರದ ಒಂದು ವರ್ಷದ ಸಾಧನೆ ಎಂದು ಶಿವಕುಮಾರ್ ಟೀಕಿಸಿದರು.

ಇವತ್ತು ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಸಾಧನೆ ಪಟ್ಟಿ ಕೇವಲ ಸುಳ್ಳಿನ ಸರಮಾಲೆ. ಅವರು ನೀಡಿರುವ ಪಟ್ಟಿಯಲ್ಲಿ ಯಾವುದೂ ಜನರನ್ನು ತಲುಪಿಲ್ಲ. ನೆರೆ ಪರಿಹಾರ ವಿಚಾರದಲ್ಲಿ ಯಾರಿಗೆ ಮನೆ ಕಟ್ಟುಕೊಡ್ತೀವಿ, ಹಣ ಕೊಡ್ತೀವಿ ಅಂದಿದ್ದರೋ ಈಗಲೂ ಆ ಭಾಗಕ್ಕೆ ಹೋಗಿ ನೋಡಿ ಯಾರಿಗೂ ಅದು ತಲುಪಿಲ್ಲ ಎಂದು ಅವರು ಆರೋಪಿಸಿದರು.

ಮುಖ್ಯ ಕಾರ್ಯದರ್ಶಿ 33 ಸಾವಿರ ಕೋಟಿ ರೂ.ನಷ್ಟ ಆಗಿದೆ ಎಂದರು. ಆದರೆ ಕೇಂದ್ರದಿಂದ ಬಂದಿದ್ದು 1800 ಕೋಟಿ ರೂ. ಮಾತ್ರ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಕೇಳಿದ 5 ಸಾವಿರ ಕೋಟಿ ರೂ.ಮಧ್ಯಂತರ ಪರಿಹಾರ ಈವರೆಗೆ ಸಿಕ್ಕಿಲ್ಲ. ಕೊರೋನ ಸಂದರ್ಭದಲ್ಲಿ ಎಲ್ಲ ವರ್ಗದ ಜನರಿಗೆ ಸಹಾಯ ಮಾಡುವುದಾಗಿ ಹೇಳಿ 1600 ಕೋಟಿ ರೂ.ಪ್ಯಾಕೇಜ್ ಘೋಷಣೆ ಮಾಡಿದರು. ಯಾರಿಗೆ ಎಷ್ಟು ತಲುಪಿದೆ ಅಂತಾ ಪಟ್ಟಿ ಕೊಡಲಿ. ಜಾಹೀರಾತಿನಲ್ಲಿ ಎಲ್ಲರಿಗೂ ಹಣ ತಲುಪಿರುವ ರೀತಿ ಪ್ರಚಾರ ಪಡೆಯುತ್ತಿದ್ದೀರಲ್ಲಾ ಎಲ್ಲರಿಗೂ ಪರಿಹಾರ ಸಿಕ್ಕಿದೆಯೇ? ಅವರು ಸತ್ತ ಮೇಲೆ ಹಣ ಕೊಡ್ತಾರಾ? ಎಂದು ಶೀವಕುಮಾರ್ ಕಿಡಿಗಾರಿದರು.

ರೈತರಿಗೆ ಸಾವಿರಾರು ಕೋಟಿ ರೂ.ನಷ್ಟ ಆಗಿದೆ. ಅವರ ಸಾಧನೆ ಪಟ್ಟಿಯಲ್ಲಿ ಯಾವ ರೈತನ ಬೆಳೆ ಖರೀದಿಸಿದ್ದಾರೆ, ಎಷ್ಟು ಜನರಿಗೆ ಪರಿಹಾರ ನೀಡಿದ್ದಾರೆ, ಯಾರಿಗೆ ಬೆಂಬಲ ಬೆಲೆ ನೀಡಿದ್ದಾರೆ ಅಂತಾ ಪಟ್ಟಿ ಕೊಡಲಿ. ವಿರೋಧ ಪಕ್ಷವಾಗಿ ನಾವು ಶ್ವೇತಪತ್ರ ಕೇಳುವುದು ತಪ್ಪಾ? ಅವರು ಮಾಡಿದ ಭ್ರಷ್ಟಾಚಾರಕ್ಕೆ ಲೆಕ್ಕ ಕೊಡಿ, ಉತ್ತರ ಕೊಡಿ ಎಂದು ಕೇಳೋದು ತಪ್ಪಾ? ಅವರು ಸಹಕಾರ ಕೊಡಿ ಅಂತಾ ಕೇಳುತ್ತಿದ್ದೀರಲ್ಲಾ ನಿಮ್ಮ ಭ್ರಷ್ಟಾಚಾರಕ್ಕೆ ನಾವು ಸಹಕಾರ ನೀಡಬೇಕಾ ಮುಖ್ಯಮಂತ್ರಿಗಳೇ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ನಮ್ಮ ಸರಕಾರವನ್ನು ‘10 ಪರ್ಸೆಂಟ್’ ಎಂದು ಹೇಳಿ ಹೋದರಲ್ಲಾ, ಕೊರೋನ ಸಂದರ್ಭದಲ್ಲಿ ನಿಮ್ಮ ಸಚಿವರು ತಮ್ಮ ಇಲಾಖೆಯಲ್ಲಿ ಮಾಡಿರುವ ಭ್ರಷ್ಟಾಚಾರ 200, 300, 400 ಪರ್ಸೆಂಟ್ ತಲುಪಿದೆ. ಇದಕ್ಕೇನು ಹೇಳುತ್ತೀರಾ? ಎಂದು ಅವರು ಪ್ರಶ್ನಿಸಿದರು.

ಕೇವಲ ನಿಮ್ಮದು ಮಾತ್ರವಲ್ಲ, ನಮ್ಮ ಐದು ವರ್ಷದ ಸರಕಾರ ಹಾಗೂ ಒಂದು ವರ್ಷದ ಸಮ್ಮಿಶ್ರ ಸರಕಾರದ ಅವಧಿಯಲ್ಲಿಯೂ ತನಿಖೆ ಮಾಡಿಸಿ. ನಾವು ಬೇಡ ಅನ್ನುವುದಿಲ್ಲ. ನಾವು ತಪ್ಪು ಮಾಡಿದ್ದರೂ ತಪ್ಪೇ, ನಮ್ಮನ್ನು ಶಿಕ್ಷೆಗೆ ಒಳಪಡಿಸಿ ಗಲ್ಲಿಗಾಕಿ ಯಾರು ಬೇಡ ಅಂದಿದ್ದಾರೆ? ನೀವು ಕೊರೋನ ಸಂದರ್ಭದಲ್ಲಿ ಪ್ರತಿ ಇಲಾಖೆಯಲ್ಲಿ ಮಾಡಿದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವುದಿಲ್ಲ ಎಂದರೆ ಹೇಗೆ? ಎಂದು ಶಿವಕುಮಾರ್ ಹೇಳಿದರು.

ಚಿಕಿತ್ಸಾ ಉಪಕರಣ ಖರೀದಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಿ ತಾನು ಖರೀದಿಸಿರುವ ಮೊತ್ತ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳ ಖರೀದಿ ಹಾಗೂ ಕರ್ನಾಟಕದ ಖರೀದಿ ವಿಚಾರದಲ್ಲಿ ಹೋಲಿಕೆ ಮಾಡಿ ವರದಿ ಪ್ರಕಟಿಸಬೇಕು. ಎ.21ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಆದೇಶದಲ್ಲಿ ಎನ್ 95 ಮಾಸ್ಕ್ ಖರೀದಿ ಮಾಡಿದ್ದು, ಇದರ ಮೊತ್ತ ತೆರಿಗೆ ಹೊರತಾಗಿ ಒಂದಕ್ಕೆ 280 ರೂ. ಎಂದು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಸ್ಯಾನಿಟೈಸರ್ ಅನ್ನು ಸಮಾಜ ಕಲ್ಯಾಣ ಇಲಾಖೆ 600 ರೂ.ಗೆ ಖರೀದಿಸಿದೆ. ಇವತ್ತು ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ರಾಜ್ಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಬಿಜೆಪಿ ಸರಕಾರ ತನ್ನ ಭ್ರಷ್ಟಾಚಾರದಿಂದ ರಾಜ್ಯವನ್ನೇ ಬೆತ್ತಲು ಮಾಡುತ್ತಿದೆ ಎಂದು ಅವರು ಕಿಡಿಗಾರಿದರು.

ರೈತರು, ಕಾರ್ಮಿಕರ ಪರಿಸ್ಥಿತಿ ಏನಾಗಿದೆ. 60 ಲಕ್ಷ ಜನ ಇವತ್ತು ಕೆಲಸ ಕಳೆದುಕೊಂಡಿದ್ದಾರೆ. ಈ ಸರ್ಕಾರ ಮಕ್ಕಳಿಗೆ, ಪೋಷಕರಿಗೆ, ನಿರುದ್ಯೋಗ ವಿಚಾರದಲ್ಲಿ, ಆಸ್ಪತ್ರೆಯವರಿಗೆ ಸರಿಯಾಗ ಮಾರ್ಗದರ್ಶನ ನೀಡಲು ಸಾಧ್ಯವಾಗಿಲ್ಲ. ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿಲ್ಲ. ಯಾವ ಸಾಧನೆ ಮಾಡಿದ್ದೀರಿ ಅಂತಾ ಈ ಸಂಭ್ರಮ. ಉಪಚುನಾವಣೆ ಗೆದ್ದೆವು, ಆಪರೇಷನ್ ಕಮಲ ಯಶಸ್ವಿಯಾಯಿತು, ಅವರನ್ನು ಮಂತ್ರಿ ಮಾಡಿ ಮಾತು ಉಳಿಸಿಕೊಂಡೆ ಅಂತಾ ಹೇಳಿಕೊಳ್ಳಿ, ಇವು ನಿಮ್ಮ ಸಾಧನೆ ಎಂದು ಶಿವಕುಮಾರ್ ಟೀಕಿಸಿದರು.

ಸರಕಾರದ ಭ್ರಷ್ಟಾಚಾರ ಹಾಗೂ ವೈಫಲ್ಯದ ಕುರಿತಾಗಿ ಇದೇ ತಿಂಗಳು 30 ರಿಂದ ಆ.2ರವರೆಗೆ ನಾಲ್ಕು ದಿನ ಎಲ್ಲ ಜಿಲ್ಲೆಗಳಲ್ಲಿ ಮಾಧ್ಯಮಗೋಷ್ಠಿ ನಡೆಸಿ ಜನರಿಗೆ ಮಾಹಿತಿ ತಲುಪಿಸಲಾಗುವುದು. ಈ ಸರಕಾರ ಕೊರೋನ ಹೆಣದಲ್ಲಿ ಹಣ ಮಾಡಲು ಹೊರಟಿದೆ. ಅದನ್ನು ಜನರಿಗೆ ತಿಳಿಸುವ ಕೆಲಸ ನಮ್ಮ ನಾಯಕರು ಮಾಡುತ್ತಾರೆ ಎಂದು ಅವರು ಹೇಳಿದರು.

ಸರಕಾರಕ್ಕೆ ಅಜೆಂಡಾ ಕೊಟ್ಟಿದ್ದೇ ಕಾಂಗ್ರೆಸ್: ರೈತರು, ಕಾರ್ಮಿಕರಿಗೆ ನೆರವು, ಅವರಿಗೆ ಉಚಿತ ಬಸ್ ವ್ಯವಸ್ಥೆ, ಶ್ರಮಿಕ ರೈಲು ಕಾರ್ಯಾಚರಣೆ, ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದು ಎಲ್ಲ ಹಂತದಲ್ಲೂ ಸರಕಾರಕ್ಕೆ ಅಜೆಂಡಾ ಮಾಡಿ ಕೊಟ್ಟಿರುವುದು ನಾವೇ. ವಿರೋಧ ಪಕ್ಷವಾಗಿ ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ ಎಂದು ಅವರು ತಿಳಿಸಿದರು.

ನಮ್ಮ ಸರಕಾರ ಇದ್ದಾಗ ಎಲ್ಲ ವಿಚಾರಕ್ಕೂ ತನಿಖೆ ನಡೆಸಿ ಅಂತಾ ಕೇಳಿದ್ದಿರಿ? ಗಣಪತಿ, ರವಿ ಅವರ ಪ್ರಕರಣದಲ್ಲಿ ನಾವು ತನಿಖೆ ನಡೆಸಲಿಲ್ಲವೇ? ಸಚಿವರಾಗಿದ್ದ ಜಾರ್ಜ್ ಅವರು ರಾಜೀನಾಮೆ ಕೊಟ್ಟಿರಲಿಲ್ಲವೇ? ತನಿಖೆಗಾಗಿ ಅಹೋರಾತ್ರಿ ಧರಣಿ ಮಾಡಿದ್ದು ನೆನಪಿಲ್ಲವೇ? ಹೋರಾಟ ಮಾಡುವುದು, ತನಿಖೆಗೆ ಆಗ್ರಹಿಸುವುದು, ನೀವು ತಿಂದಿರುವುದನ್ನು ಕಕ್ಕಿಸಬೇಕಾಗಿರುವುದು ನಮ್ಮ ಕರ್ತವ್ಯ. ನಿಮ್ಮ ಬೆದರಿಕೆಗೆ ನಾವು ಹೆದರುವುದಿಲ್ಲ. ನಮ್ಮ ಅವಧಿಯನ್ನು ಸೇರಿಸಿ ತನಿಖೆ ಮಾಡಿಸಿ ಎಂದು ಸರಕಾರಕ್ಕೆ ಶಿವಕುಮಾರ್ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ಶಂಕರ್, ಉಪ ಮುಖ್ಯಸ್ಥ ವಿ.ಆರ್.ಸುದರ್ಶನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News