ಅಮೆರಿಕದ ಮಾಡೆರ್ನಾ ಕೋವಿಡ್ ಲಸಿಕೆ ವರ್ಷಾಂತ್ಯಕ್ಕೆ ಲಭ್ಯ

Update: 2020-07-28 03:57 GMT

ವಾಷಿಂಗ್ಟನ್, ಜು.28: ಮಾಡೆರ್ನಾ ಇನ್‌ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಈ ವರ್ಷಾಂತ್ಯದ ಒಳಗಾಗಿ ಸಮುದಾಯ ಬಳಕೆಗೆ ಲಭ್ಯವಾಗಲಿದೆ ಎಂದು ಸರ್ಕಾರಿ ಅಧಿಕಾರಿಗಳು ಸೋಮವಾರ ಪ್ರಕಟಿಸಿದ್ದಾರೆ.

ನಿಯಂತ್ರಣಾತ್ಮಕ ಅನುಮೋದನೆಗೆ ಅಂತಿಮ ಹಂತವಾಗಿ, ಇದು ಬಳಕೆಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ದೃಢೀಕರಿಸಲು ಅಗತ್ಯವಾದ 30 ಸಾವಿರ ಮಂದಿಯ ಮೇಲೆ ಪ್ರಯೋಗ ಆರಂಭವಾಗಿದೆ ಎಂದು ಕಂಪೆನಿ ಪ್ರಕಟಿಸಿದೆ.

ಕೊರೋನ ವೈರಸ್ ವಿರುದ್ಧದ ತ್ವರಿತ ಅಭಿವೃದ್ಧಿ ಕ್ರಮ ಯೋಜನೆಯಡಿ ಅಭಿವೃದ್ಧಿಪಡಿಸಿದ ಲಸಿಕೆಯ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿರುವುದು ಇದೇ ಮೊದಲು. ಈ ಪರಿಣಾಮಕಾರಿ ಲಸಿಕೆ ಕೊರೋನ ವೈರಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನೆರವಾಗಲಿದೆ ಎಂದು ಕಂಪೆನಿ ಪ್ರಕಟಿಸುತ್ತಿದ್ದಂತೆಯೇ ಕಂಪೆನಿಯ ಷೇರು ಮೌಲ್ಯ ಒಂದೇ ದಿನ 7.5%ದಷ್ಟು ಹೆಚ್ಚಿದೆ.

ಇದುವರೆಗೆ ಯಾವ ಲಸಿಕೆಯನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡದ ಈ ಕಂಪೆನಿ ಕೋವಿಡ್ ಲಸಿಕೆ ಸಂಶೋಧನೆಗಾಗಿ 100 ಕೋಟಿ ಡಾಲರ್ ನೆರವನ್ನು ಸರ್ಕಾರದಿಂದ ಪಡೆದಿತ್ತು. ಇದರಂತೆ ಹಲವು ಲಸಿಕೆ ಅಭಿವೃದ್ಧಿ ಕಂಪೆನಿಗಳು ಆಪರೇಷನ್ ವ್ಯ್ರಾಪ್ ಸ್ಪೀಡ್ ಯೋಜನೆಯಡಿ ನೆರವು ಪಡೆದಿದ್ದವು. 150ಕ್ಕೂ ಹೆಚ್ಚು ಕೊರೋನ ವೈರಸ್ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಸುಮಾರು 25 ಕಂಪೆನಿಗಳು ಈಗಾಗಲೇ ಮಾನವನ ಮೇಲೆ ಇದರ ಪ್ರಯೋಗ ನಡೆಸಲು ಸಜ್ಜಾಗಿವೆ.

ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು 2020ರ ಕೊನೆಯ ಒಳಗಾಗಿ ವಿತರಿಸುವುದು ಕಷ್ಟಕರವಾದ ಗುರಿ. ಆದರೆ ಅಮೆರಿಕದ ಜನತೆಗೆ ಇದು ಸಾಧ್ಯ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್) ವೈದ್ಯ ಫ್ರಾನ್ಸಿಸ್ ಕೊಲಿನ್ಸ್ ಹೇಳಿದ್ದಾರೆ.

ಉತ್ಪಾದಕ ಕಂಪೆನಿ, ಮಾನವ ಪರೀಕ್ಷೆ ನಡೆದಿರುವ ನಡುವೆಯೇ ಉತ್ಪಾದನೆಯ ವೇಗ ಹೆಚ್ಚಿಸುವ ಮೂಲಕ ವಿಶ್ವಾದ್ಯಂತ ವೇಗವಾಗಿ ಹರಡುವ ವೈರಸ್ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಿದೆ. ಇದುವರೆಗೆ ವಿಶ್ವಾದ್ಯಂತ 6.5 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News