ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಅನಿವಾರ್ಯ

Update: 2020-07-29 04:48 GMT

ಜಗತ್ತಿನಲ್ಲಿ ಕೊರೋನ ಬಂದ ನಂತರ ನಮ್ಮ ಸಾಮಾಜಿಕ ಜೀವನದಲ್ಲಿ ಸಾಕಷ್ಟು ಏರುಪೇರಾಗಿದೆ. ಜನಸಾಮಾನ್ಯರ ಬದುಕಿನ ಶೈಲಿಯೂ ಬದಲಾಗಿದೆ. ಜಾಗತೀಕರಣದ ಮುಕ್ತ ಆರ್ಥಿಕ ನೀತಿಯ ಭ್ರಮೆಗಳೆಲ್ಲ ಕಳಚಿಬಿದ್ದಿವೆ. ವಿಶೇಷವಾಗಿ ನಮ್ಮ ಆರೋಗ್ಯ ವ್ಯವಸ್ಥೆಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿ ಬಂದಿದೆ. ಈವರೆಗೆ ಹಣವಿದ್ದವರಿಗೆ ಆರೋಗ್ಯ, ಇಲ್ಲದವರಿಗೆ ಅನಾರೋಗ್ಯ ಎಂಬಂತಾಗಿತ್ತು. ದುಡ್ಡಿದ್ದವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಡವರಿಗೆ ಸರಕಾರಿ ದವಾಖಾನೆ ಅನಿವಾರ್ಯವಾಗಿತ್ತು.ಸರಕಾರಿ ಆಸ್ಪತ್ರೆಗಳೆಂದರೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ, ಆರೈಕೆ ಆಗುವುದಿಲ್ಲ ಎಂಬ ಭಾವನೆ ಜನರಲ್ಲಿತ್ತು. ಆದರೆ ಯಾವಾಗ ಕೋವಿಡ್-19 ಬಂದು ಅಪ್ಪಳಿಸಿತೋ ಆಗ ಎಲ್ಲವೂ ಬದಲಾಯಿತು. ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರಕಾರಿ ಆಸ್ಪತ್ರೆಗಳ ಪ್ರಾಮುಖ್ಯತೆ ಎಲ್ಲರಿಗೂ ಅರ್ಥವಾಗತೊಡಗಿತು.ಕೋವಿಡ್ ಪೀಡಿತರಿಗೆ ಖಾಸಗಿ ಆಸ್ಪತ್ರೆಗಳ ಬಾಗಿಲು ತೆರೆಯಲಿಲ್ಲ. ಸರಕಾರದ ಆಸ್ಪತ್ರೆಗಳಿಗೇ ರೋಗಿಗಳು ಧಾವಿಸತೊಡಗಿದರು. ಈಗಂತೂ ರಾಜಧಾನಿ ಮಾತ್ರವಲ್ಲದೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ಆಸ್ಪತ್ರೆಗಳು ಕೊರೋನ ಪೀಡಿತರಿಂದ ತುಂಬಿ ತುಳುಕುತ್ತಿವೆ.

ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಸರಕಾರದ ಕ್ರಮಗಳು ಯಶಸ್ವಿಯಾಗಿಲ್ಲ. ಸರಕಾರದ ಎಚ್ಚರಿಕೆಗೆ ಮಣಿಯಲಾಗದಷ್ಟು ಖಾಸಗಿ ಆಸ್ಪತ್ರೆಗಳು ಉದ್ದಟತನ ತೋರಿಸುತ್ತಿವೆ. ಜನ ಸಾಮಾನ್ಯರು ದಿಕ್ಕುಗಾಣದೆ ಹಲವಾರು ಖಾಸಗಿ ಆಸ್ಪತ್ರೆಗಳಿಗೆ ಎಡತಾಕಿ ಹೈರಾಣಾಗಿದ್ದಾರೆ. ಖಾಸಗಿ ದವಾಖಾನೆಗಳ ಅಮಾನವೀಯತೆಯ ಪರಿಣಾಮವಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಸಹಾಯಕರಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದವರು ದಿನಕ್ಕೆ 35 ರಿಂದ 40 ಸಾವಿರ ರೂಪಾಯಿ ವರೆಗೆ ಶುಲ್ಕ ತೆರಬೇಕಾಗಿ ಬಂದಿದೆ. ಇಂತಹ ಆಸ್ಪತ್ರೆಗಳಲ್ಲಿ ಐದಾರು ದಿನ ಚಿಕಿತ್ಸೆ ಪಡೆದರೆ ಒಟ್ಟು ಚಿಕಿತ್ಸೆಯ ವೆಚ್ಚ ಹತ್ತು ಲಕ್ಷ ರೂಪಾಯಿ ದಾಟುತ್ತದೆ. ಇದನ್ನು ಜನಸಾಮಾನ್ಯರಂತೂ ಭರಿಸಲು ಸಾಧ್ಯವಿಲ್ಲ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ಜನರಿಗೂ ಈ ವೆಚ್ಚ ಭರಿಸುವುದು ಅಸಾಧ್ಯ. ಹೀಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅಂದರೆ ಸರಕಾರದ ಆಸ್ಪತ್ರೆಗಳಿಗೆ ಮೊರೆ ಹೋಗುವುದು ಅನಿವಾರ್ಯ ವಾಗಿದೆ. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಅವುಗಳಲ್ಲಿ ಅನೇಕವು ಭಾರೀ ಉದ್ಯಮ ಪತಿಗಳ, ಪ್ರಭಾವಿ ರಾಜಕಾರಣಿಗಳ ಒಡೆತನಕ್ಕೊಳಪಟ್ಟಿವೆ.

 ದಿನ ದಿನಕ್ಕೆ ಕೊರೋನ ಸೋಂಕಿಗೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಕೋವಿಡ್ ಕೇಂದ್ರ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ವೈದ್ಯಕೀಯ ಸಿಬ್ಬಂದಿಯೇನೋ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿದ್ದರೂ ಹಾಸಿಗೆಗಳ ಕೊರತೆ ಎಲ್ಲೆಡೆ ಸಾಮಾನ್ಯವಾಗಿದೆ. ಕೋವಿಡ್ ರೋಗಿಗಳಿಗೆ ಸಹಜವಾಗಿ ಆದ್ಯತೆ ನೀಡಲೇ ಬೇಕಾಗಿರುವುದರಿಂದ ಇತರ ಕಾಯಿಲೆಗಳಿಂದ ಬಳಲುವವರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ತಾಲೂಕು ಮಟ್ಟದ ಆಸ್ಪತ್ರೆಗಳ ಸ್ಥಿತಿ ಗತಿ ಅತ್ಯಂತ ಚಿಂತಾಜನಕವಾಗಿದೆ. ಅವುಗಳಲ್ಲಿ ಹೆರಿಗೆಗಳನ್ನು ಬಿಟ್ಟರೆ ಬೇರೆ ಗಂಭೀರವಾದ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಸರಕಾರ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಅಲ್ಲಿ ಕಿಡ್ನಿ, ಕ್ಯಾನ್ಸರ್‌ನಂತಹ ಗಂಭೀರವಾದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು. ಸದ್ಯಕ್ಕಂತೂ ಕೊರೋನ ತೊಲಗುವ ಸೂಚನೆಗಳಿಲ್ಲ. ಕಾರಣ ಸರಕಾರದ ಆಸ್ಪತ್ರೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸುವುದು ತುರ್ತು ಅಗತ್ಯವಾಗಿದೆ. ಎಪಿಎಲ್, ಬಿಪಿಎಲ್ ಮಾನದಂಡವನ್ನು ಸದ್ಯಕ್ಕೆ ಬದಿಗಿಟ್ಟು ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು.

ನಮ್ಮ ಸರಕಾರಗಳ ಖಾಸಗೀಕರಣ ಪರವಾದ ನೀತಿ ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಅಡ್ಡಿಯಾಗಿದೆ. ಆದರೆ ಕೊರೋನ ಬಂದ ನಂತರವಾದರೂ ಸರಕಾರ ಜನಸಾಮಾನ್ಯರ ಹಿತದೃಷ್ಟಿಯಿಂದ ತನ್ನ ಧೋರಣೆಯನ್ನು ಬದಲಿಸಬೇಕಾಗಿದೆ. ಆರೋಗ್ಯ, ಶಿಕ್ಷಣ ಮತ್ತು ನೀರಾವರಿ ಕ್ಷೇತ್ರಗಳು ಎಂದಿಗೂ ಖಾಸಗಿ ವಲಯಕ್ಕೆ ಹೋಗಬಾರದು. ಇವೆಲ್ಲ ಸರಕಾರದ ಒಡೆತನದಲ್ಲಿದ್ದರೆ ಸೂಕ್ತ ಎಂಬುದು ಕೊರೋನ ನಂತರದ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ದೇಶದಲ್ಲಿ ಒಂದು ವೇಳೆ ಸರಕಾರದ ಆಸ್ಪತ್ರೆಗಳು ಇರದಿದ್ದರೆ ಈ ಕೊರೋನ ಕಾಲದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿರುತ್ತಿತ್ತು. ಬ್ರಿಟನ್‌ನಂತಹ ದೇಶಗಳಲ್ಲೂ ಸರಕಾರದ ಒಡೆತನದ ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದೆ. ಖಾಸಗಿ ವಲಯದ ಗುರಿ ಬರೀ ಲಾಭಗಳಿಕೆ, ಆದರೆ ಸರಕಾರಿ ಆಸ್ಪತ್ರೆಗಳು ಹಾಗಲ್ಲ. ಅವು ಲಾಭ, ನಷ್ಟದ ಗೊಡವೆಗೆ ಹೋಗದೆ ಜನರಿಗೆ ಸೂಕ್ತವಾದ ಸೇವೆಯನ್ನು ನೀಡಬೇಕಾಗುತ್ತದೆ. ಇದನ್ನು ಸರಕಾರ ಹಾಗೂ ಜನತೆ ಮನಗಾಣಬೇಕಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಂಕಲ್ಪ ತೊಡಬೇಕಾಗಿದೆ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಖಾಸಗಿ ಆಸ್ಪತ್ರೆಗಳನ್ನು ಸದ್ಯಕ್ಕೆ ರಾಷ್ಟ್ರೀಕರಣ ಮಾಡುವ ಸ್ಥಿತಿಯಲ್ಲಿ ಸರಕಾರ ಇಲ್ಲ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧಾತ್ಮಕವಾಗಿ ಸರಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News