ಬಿಬಿಎಂಪಿ ಕೌನ್ಸಿಲ್ ಸಭೆ: ಆರು ತಿಂಗಳು ಹಾಲಿ ಸದಸ್ಯರ ಅಧಿಕಾರಾವಧಿ ಮುಂದೂಡಲು ಮನವಿ

Update: 2020-07-28 17:54 GMT

ಬೆಂಗಳೂರು, ಜು.28: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಅದ್ದರಿಂದ ಹಾಲಿ ಸದಸ್ಯರ ಅಧಿಕಾರಾವಧಿಯನ್ನು ಆರು ತಿಂಗಳು ಮುಂದೂಡಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್ ಅವರು ಸರಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ವಿರೋಧ ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದರು.

ಮಂಗಳವಾರ ಬಿಬಿಎಂಪಿ ಕೇಂದ್ರಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಸದಸ್ಯರ ಅಧಿಕಾರಾವಧಿ ಸೆ.10ಕ್ಕೆ ಮುಗಿಯಲಿದೆ. ಆದರೆ, ಕೊರೋನ ಸೋಂಕು ಹಿನ್ನೆಲೆ ನಗರದಲ್ಲಿ ಯಾವುದೇ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಹಾಗಾಗಿ, ಬಿಬಿಎಂಪಿ ಚುನಾಯಿತ ಸದಸ್ಯರ ಅಧಿಕಾರಾವಧಿಯನ್ನು ಆರು ತಿಂಗಳ ಅವಧಿಗೆ ವಿಸ್ತರಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ನಗರದಲ್ಲಿ ಕಳೆದ ವಾರ ಸುರಿದ ಅಂತಹ ಮಳೆಗೆ ಚರಂಡಿಗಳ ತುಂಬಿಕೊಂಡಿದ್ದು, ಸ್ವಚ್ಛತೆ ಮಾಡದೆ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ಕುಡಿಯುವ ನೀರು, ವಸತಿ ಹಾಗೂ ಇತರೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಕಲ್ಯಾಣ ಹಾಗೂ ಇಂಜಿನಿಯರ್ ವಿಭಾಗದ ಕಾರ್ಯ ಸ್ಥಗಿತವಾಗಿದ್ದು ಕೂಡಲೇ ಅನುದಾನ ಕೊಡಬೇಕು. ಕಡತಗಳೆಲ್ಲವೂ ಅಧಿಕಾರಿಗಳ ಬಳಿಯಿದ್ದು, ಯಾವೊಂದು ಕಾರ್ಯವನ್ನು ಮಾಡಲಾಗುತ್ತಿಲ್ಲ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಒತ್ತಾಯಿಸಿದರು.

ಕಲ್ಯಾಣ ಯೋಜನೆಗಳ ಅಭಿವೃದ್ಧಿ ಹಾಗೂ ಅನುದಾನ ಹಂಚಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಕಲ್ಯಾಣ ವಿಭಾಗ ವಿಶೇಷ ಆಯುಕ್ತರು ಮತ್ತು ವಲಯಗಳ ಜಂಟಿ ಆಯುಕ್ತರೊಂದಿಗೆ ಚರ್ಚೆ ಮಾಡಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಮೇಯರ್ ಗೌತಮ್‍ ಕುಮಾರ್ ಪ್ರತಿಕ್ರಿಯೆ ನೀಡಿದರು.

ಕೋವಿಡ್ ಸಮೀಕ್ಷೆಗೆ ಅಧಿಕಾರಿಗಳೇ ಇಲ್ಲ: ಈಗಾಗಲೇ ಕೋವಿಡ್ ಸೋಂಕಿತರು ಮತ್ತು ಸಂಪರ್ಕಿತರ ಪತ್ತೆ ಕಾರ್ಯಕ್ಕೆ ವಾರ್ಡ್ ಮಟ್ಟದಲ್ಲಿ 120 ರಿಂದ 150 ವಿವಿಧ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಕೇವಲ 10 ರಿಂದ 15 ಜನರು ವರದಿ ಮಾಡಿಕೊಂಡಿದ್ದು, ಸೋಂಕು ನಿಯಂತ್ರಣಕ್ಕೆ ಹಿನ್ನಡೆಯಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಕೋವಿಡ್ ಆರೈಕೆ ಕೇಂದ್ರ ತೆರೆಯುವ ಬಗ್ಗೆ ಕ್ರಮವಹಿಸಬೇಕು ಎಂದು ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಸಹಜ ಸಾವಿಗೆ ಅಂತ್ಯಕ್ರಿಯೆ ಸಂಕಷ್ಟ: ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ಬಿಬಿಎಂಪಿ ಸಿಬ್ಬಂದಿ ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ ಸಾಮಾನ್ಯ ಅಥವಾ ಕೋವಿಡ್ ಸೋಂಕಿಲ್ಲದೆ ಮೃತಪಟ್ಟ ದೇಹ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಸ್ಮಶಾನ ಅಥವಾ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ನೆಗೆಟಿವ್ ಪ್ರಮಾಣಪತ್ರ ಕೇಳುತ್ತಿದ್ದಾರೆ. ಹೀಗಾಗಿ ಅಂತ್ಯಕ್ರಿಯೆಗೆ 2 ದಿನ ಕಾಯುವಂತಾಗಿದೆ. ಕೂಡಲೇ ಸರಳ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಮಾಜಿ ಮೇಯರ್ ಸಂಪತ್‍ಕುಮಾರ್ ತಿಳಿಸಿದರು.

20 ಲಕ್ಷರೂ. ಕೊರೋನ ಅನುದಾನ ನೀಡಿ

ವಾರ್ಡವಾರು 20ಲಕ್ಷ ರೂ. ಬಳಕೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಮೂರು ತಿಂಗಳಾದರೂ ಅನುದಾನ ಬಿಡುಗಡೆಯಾಗದೆ ಸಾರ್ವಜನಿಕರಿಗೆ ಯಾವೊಂದು ಸಹಾಯವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ವಾರ್ಡ್ ಮಟ್ಟದಲ್ಲಿ ಸಭೆ ನಡೆಸಿ ಪ್ರೊಸೀಡಿಂಗ್ ವಿಡಿಯೋ ಕಲಿಸಿದ್ದರೂ ಅಧಿಕಾರಿಗಳು ಹಣ ಬಿಡುಗಡೆ ಮಾಡದೇ ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯ ರಮೇಶ್ ಆರೋಪಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ 8 ಲಕ್ಷರೂ. ಬಿಲ್

ಜೀವನಭೀಮ ನಗರ ವಾರ್ಡ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಸೋಂಕಿಗೆ 10 ದಿನ ಚಿಕಿತ್ಸೆ ಪಡೆದ ವ್ಯಕ್ತಿಗೆ 8 ಲಕ್ಷರೂ. ಬಿಲ್ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿ ಎಚ್ಚರಿಕೆ ನೀಡಿದರೂ ಕೇವಲ 80 ಸಾವಿರರೂ. ಕಡಿಮೆ ಮಾಡಿ ಉಳಿದ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ. ಧನಗಾಹಿ ಆಸ್ಪತ್ರೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಸದಸ್ಯೆ ವೀಣಾಕುಮಾರಿ ಒತ್ತಾಯಿಸಿದರು.

ಆರೋಗ್ಯದ ಅನುದಾನಕ್ಕೆ ಮನವಿ

ಪಾಲಿಕೆಯ ಪ್ರತಿ ವಾರ್ಡ್ ಗೆ 10 ಲಕ್ಷರೂ. ವರೆಗೆ ಅರೋಗ್ಯ ಸಹಾಯಧನ ನೀಡಲು ಅನುದಾನ ಮೀಸಲಿಡಲಾಗಿದೆ. ಆದರೆ, ಈವರೆಗೆ ಸಾವಿರಾರು ಅರ್ಜಿಗಳು ಬಂದಿದ್ದರೂ, ಒಬ್ಬರಿಗೂ ಆರೋಗ್ಯಕ್ಕೆ ಧನಸಹಾಯ ಮಾಡಲಾಗಿಲ್ಲ. ನಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಯಾವುದೇ ನೆರವು ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.

1,800 ನಾಪತ್ತೆ ಪ್ರಕರಣ ಪೊಲೀಸರಿಗೆ

ನಗರದಲ್ಲಿ ಈವರೆಗೆ ಕೋವಿಡ್ ಪರೀಕ್ಷೆ ವೇಳೆ ತಪ್ಪು ವಿಳಾಸ ಮತ್ತು ಅಸ್ತಿತ್ವದಲ್ಲಿ ಇರದ ಮೊಬೈಲ್ ನಂಬರ್ ಕೊಟ್ಟು ತಪ್ಪಿಸಿಕೊಂಡ 1,800 ಸೋಂಕಿತರು ಪತ್ತೆ ಮಾಡಲು ಪೊಲೀಸರಿಗೆ ಅವರ ಪಟ್ಟಿಯನ್ನು ಕೊಡಲಾಗಿದೆ. ಜತೆಗೆ ಇನ್ನುಮುಂದೆ ಸೋಂಕು ಪರೀಕ್ಷೆ ವೇಳೆ ಮೊಬೈಲ್ ಒಟಿಪಿ, ಗುರುತಿನ ಚೀಟಿ ಮತ್ತು ಎರಡು ಮೊಬೈಲ್ ನಂಬರ್ ಪಡೆದು ಪರೀಕ್ಷೆ ಮಾಡಲಾಗುವುದು ಎಂದು ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.

ಆಸ್ಪತ್ರೆಗಳಿಂದ ತೆರಿಗೆ ವಿನಾಯಿತಿಗೆ ಮನವಿ

ನಗರದಲ್ಲಿ ಕೆಲವೊಂದು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಸಂಪೂರ್ಣ ಹಾಸಿಗೆಗಳನ್ನು ಬಿಬಿಎಂಪಿಯ ಚಿಕಿತ್ಸೆಗೆ ವಹಿಸುತ್ತೇವೆ. ಆದರೆ, ನಮಗೆ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಬೇಕು. ಜತೆಗೆ ನಮ್ಮಲ್ಲಿ ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯಗಳಿಲ್ಲ. ಬಿಬಿಎಂಪಿ ಹೊಸ ವೆಂಟಿಲೇಟರ್ ಅಳವಡಿಸಿದರೆ ಅದರಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ ಮಾಲಕರು ತಿಳಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸಭೆ ಮುಂದಿಟ್ಟು ಕೌನ್ಸಿಲ್ ತೀರ್ಮಾನ ಪಡೆಯಲಾಗುವುದು ಎಂದು ತಿಳಿಸಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಸಭೆಗೆ ಮಾಹಿತಿ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News