5 ನೆ ತರಗತಿ ವರೆಗೆ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ

Update: 2020-07-29 15:36 GMT
ಫೈಲ್ ಚಿತ್ರ

ಹೊಸದಿಲ್ಲಿ, ಜು. 29: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಪರಿಚಯಿಸುವ ಗುರಿ ಹೊಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ ಹಾಗೂ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಸಚಿವಾಲಯಕ್ಕೆ ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಿದೆ.

ಉನ್ನತ ಶಿಕ್ಷಣ ಶಿಕ್ಷಣ ಸಂಸ್ಥೆಗಳಿಗೆ ಒಂದೇ ನಿಯಂತ್ರಣ ಸಂಸ್ಥೆ, ಎಂಫಿಲ್ ಯೋಜನೆ, ಕೆಳದರ್ಜೆಯ ಮಂಡಳಿ ಪರೀಕ್ಷೆಗಳು ಹಾಗೂ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಗಳನ್ನು ಮುಂದುವರಿಸದೇ ಇರುವುದು ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಶಿಕ್ಷಣ ನೀತಿಯನ್ನು 1986ರಲ್ಲಿ ರೂಪಿಸಲಾಗಿತ್ತು. ಅನಂತರ 1992ರಲ್ಲಿ ಪರಿಷ್ಕರಿಸಲಾಗಿತ್ತು. ಅನಂತರ ಇದುವರೆಗೆ ಪರಿಷ್ಕರಿಸಲೇ ಇಲ್ಲ. ಆದುದರಿಂದ ಈ ಪರಿಷ್ಕಾರ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಲು ಕೂಡ ಸಂಪುಟ ಅನುಮೋದನೆ ನೀಡಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಾಜಿ ವರಿಷ್ಠ ಕೆ. ಕಸ್ತೂರಿರಂಗನ್ ನೇತೃತ್ವದ ತಂಡ ನೂತನ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ಅವರಿಗೆ ಸಲ್ಲಿಸಿತ್ತು. ವಿವಿಧ ಪಾಲುದಾರರಿಂದ ಪ್ರತಿಕ್ರಿಯೆ ಪಡೆಯಲು ಈ ಕರಡನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿತ್ತು. ಈ ಕರಡಿನ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆ ಸ್ವೀಕರಿಸಿತ್ತು.

ನೂತನ ನೀತಿಯ ಮುಖ್ಯಾಂಶಗಳು

- ಎಂಫಿಲ್ ಕೋರ್ಸ್ ರದ್ದು. -ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಮಟ್ಟದ ಕೋರ್ಸ್‌ ಗಳು ಅಂತರ್ ಶಿಸ್ತೀಯ ಕೋರ್ಸ್ ಆಗಲಿದೆ.

- ವೈದ್ಯಕೀಯ ಹಾಗೂ ಕಾನೂನು ಕಾಲೇಜುಗಳನ್ನು ಹೊರತುಪಡಿಸಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಏಕ ನಿಯಂತ್ರಣ ಸಂಸ್ಥೆ ಆಡಳಿತ ನಡೆಸಲಿದೆ.

 -ಶಾಲೆಗಳಲ್ಲಿ ಮಂಡಳಿ ಪರೀಕ್ಷೆಗೆ ಪ್ರಾಮುಖ್ಯತೆ ಇಲ್ಲ. ವಿದ್ಯಾರ್ಥಿಯ ವಾಸ್ತವ ಜ್ಞಾನದ ಪರೀಕ್ಷೆಗೆ ಆದ್ಯತೆ.

- 5ನೇ ತರಗತಿ ವರೆಗೆ ಮನೆ ಭಾಷೆ, ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆ ಕಲಿಕಾ ಮಾಧ್ಯಮ

- ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಿ ಶಾಲಾ ಪಠ್ಯವನ್ನು ಕಡಿತಗೊಳಿಸುವುದು. 6ನೇ ತರಗತಿಯಿಂದ ವೃತ್ತಿಪರ ಶಿಕ್ಷಣವನ್ನು ಸಂಯೋಜಿಸುವುದು.

 - ರಿಪೋರ್ಟ್ ಕಾರ್ಡ್ ಕೇವಲ ಮಾರ್ಕ್ಸ್ ಅನ್ನು ಮಾತ್ರ ಒಳಗೊಂಡಿರುವ ಬದಲು ಕೌಶಲ ಹಾಗೂ ಸಾಮರ್ಥ್ಯದ ಸಮಗ್ರ ವರದಿಯನ್ನು ಒಳಗೊಳ್ಳಲಿದೆ.

- ವಿಶ್ವವಿದ್ಯಾನಿಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ.

- ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯದ ಪ್ರವೇಶಕ್ಕೆ ಏಕರೂಪದ ಸಾಮಾನ್ಯ ಪರೀಕ್ಷೆ ನಡೆಸಲಾಗುತ್ತದೆ.

- 2035ರ ಹೊತ್ತಿಗೆ ಎಲ್ಲ ಶೇ. 50ರಷ್ಟು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡುವುದು.

- ಖಾಸಗಿ ಮತ್ತು ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯ. ಪ್ರಸ್ತುತ ಡೀಮ್ಡ್ ವಿಶ್ವವಿದ್ಯಾನಿಲಯಗಳು, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಪ್ರತ್ಯೇಕ ಸಂಸ್ಥೆಗಳಿಗೆ ಪ್ರತ್ಯೇಕ ನಿಯಮಾವಳಿಗಳಿವೆ. ಹೊಸ ಶಿಕ್ಷಣ ನೀತಿಯ ಅನ್ವಯ ಗುಣಮಟ್ಟದ ಕಾರಣಗಳಿಂದ ಎಲ್ಲ ಸಂಸ್ಥೆಗಳಿಗೂ ಒಂದೇ ರೀತಿಯ ನಿಯಮಗಳು ಅನ್ವಯವಾಗಲಿವೆ.

- ಕಲೆ ಮತ್ತು ವಿಜ್ಞಾನದ ರೀತಿಯಲ್ಲಿ ಪ್ರತ್ಯೇಕಗೊಳಿಸಿದ ಶಿಕ್ಷಣ ವ್ಯವಸ್ಥೆ ಇರುವುದಿಲ್ಲ.

- ಪ್ರಾದೇಶಿಕ ಭಾಷೆಗಳಲ್ಲಿ ಈ ಕೋರ್ಸ್‌ಗಳ ಅಭಿವೃದ್ಧಿ. ವರ್ಚುವಲ್ ಲ್ಯಾಬ್ ಗಳು, ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ.

- ದೇಶದಲ್ಲಿ 45 ಸಾವಿರಕ್ಕೂ ಅಧಿಕ ಮಾನ್ಯತೆ ಪಡೆದ ಕಾಲೇಜುಗಳು ಇವೆ. ಈ ಕಾಲೇಜುಗಳ ಮಾನ್ಯತೆಯ ಸ್ಥಿತಿಗತಿ ಆಧಾರದಲ್ಲಿ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಹಣಕಾಸಿನ ಸ್ವಾಯತ್ತೆ.

- ಮೂಲಭೂತ ಸಾಕ್ಷರತೆ ಹಾಗೂ ಮೂಲಭೂತ ಅಂಕ ಜ್ಞಾನಕ್ಕೆ ಗಮನ ಹರಿಸುವುದು. -ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಂದಾಜಿಸಲು ರಾಷ್ಟ್ರೀಯ ವೌಲ್ಯಮಾಪನಕೇಂದ್ರ ‘ಪಾರಖ್’ ರಚನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News