ಮೆಹಬೂಬಾ ಮುಫ್ತಿಯನ್ನು ಕೇಂದ್ರ ಸರಕಾರ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ: ಪುತ್ರಿ ಮೆಹಬೂಬಾ ಆರೋಪ

Update: 2020-07-29 18:40 GMT

ಶ್ರೀನಗರ,ಜು.29: ತನ್ನ ತಾಯಿ, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಕ್ರೂರವಾದ ರೀತಿಯಲ್ಲಿ ಕೇಂದ್ರ ಸರಕಾರವು ಬಂಧನದಲ್ಲಿರಿಸಿದೆ ಎಂದು ಪುತ್ರಿ ಇಲ್ತಿಜಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಕಳೆದ ವರ್ಷದ ಆಗಸ್ಟ್ 5ರಂದು ಕೇಂದ್ರ ಸರಕಾರವು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರ ಪ್ರಕಟಿಸಿದ ಬಳಿಕ ಪೊಲೀಸರು ವಾರಂಟ್‌ನೊಂದಿಗೆ ಆಗಮಿಸಿದ್ದರು. ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗುವ ನಿರೀಕ್ಷೆಯಿರುವುದರಿಂದ ನಾವು ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ. ಆದರೆ ಬಂಧಿಸುವುದಿಲ್ಲ ಎಂದು ಭರವಸೆ ನೀಡಿದ್ದರು.

‘‘ನನ್ನ ತಾಯಿ, ಸಣ್ಣ ಸೂಟ್‌ಕೇಸ್, ಎರಡು ಜೋಡಿ ಬಟ್ಟೆಗಳು ಹಾಗೂ ಕೆಲವು ಅಗತ್ಯ ಸಾಮಾಗ್ರಿಗಳೊಂದಿಗೆ ಅವರೊಂದಿಗೆ ಹೊರಟಿದ್ದರು. ಮೂರ್ನಾಲ್ಕು ದಿನಗಳೊಳಗೆ ತಾನು ಮನೆಗೆ ಮರಳಿ ಬರಬಹುದೆಂದು ಭಾವಿಸಿದ್ದರು. ಆದರೆ ಆಕೆ ಮನೆಗೆ ಬರಲಿಲ್ಲ. ಅವರ ಬಗ್ಗೆ ಏನೂ ಸುದ್ದಿ ಕೂಡಾ ಸಿಗುತ್ತಿಲ್ಲ’’ವೆಂದು ಇಲ್ತಿಜಾ ಹೇಳಿದ್ದಾರೆ.

ಕಷ್ಟಕರವಾದ ಪರಿಸ್ಥಿತಿಯಲ್ಲೂ ನನ್ನ ತಾಯಿ ಅಪಾರವಾದ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಆದೃಷ್ಟವಶಾತ್ ತನ್ನ ತಾಯಿಗೆ ಅಗಾಧವಾದ ಅಂತರಿಕ ಶಕ್ತಿಯಿತ್ತು. ಆದರೆ ಆಕೆಯನ್ನು ಪ್ರತ್ಯೇಕವಾಗಿ ಇರಿಸುವುದು ಅತ್ಯಂತ ಕ್ರೂರವಾದುದು. ಆಕೆಯನ್ನು ಜರ್ಝರಿತಗೊಳಿಸುವ ಉದ್ದೇಶ ಇದಾಗಿದೆ ಎಂದು ಇಲ್ತಿಜಾ ಹೇಳಿದರು.

ಕಳೆದ ಮೇನಲ್ಲಿ ಕೇಂದ್ರ ಸರಕಾರವು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮೆಹಬೂಬಾ ಮುಫ್ತಿ ಹಾಗೂ ಇತರ ಹಲವಾರು ಕಾಶ್ಮೀರಿ ನಾಯಕರ ಬಂಧನವನ್ನು ಮೂರು ತಿಂಗಳಿಗೆ ವಿಸ್ತರಿಸಿತ್ತು. ಮಾಜಿ ಸಚಿವರಾದ ಫಾರೂಕ್ ಅಬ್ದುಲ್ಲಾ ಹಾಗೂ ಉಮರ್ ಅಬ್ದುಲ್ಲಾ ಅವರನ್ನು ಕೂಡಾ ಬಂಧಿಸಲಾಗಿತ್ತಾದರೂ, ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಿತ್ತು.

ಜಮ್ಮುಕಾಶ್ಮೀರದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ವಾಸ್ತವ್ಯ ಕಾನೂನುಗಳು ಹಾಗೂ ಇಂಟರ್‌ನೆಟ್ ನಿರ್ಬಂಧಗಳನ್ನು ಕೂಡಾ ಇಲ್ತಿಜಾ ಸಂದರ್ಶನದಲ್ಲಿ ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ಈಗ ಯಾವುದೇ ರಾಜಕೀಯ ಪ್ರತಿ ನಿಧಿಗಳು ಇಲ್ಲವಾಗಿದ್ದು, ಎಲ್ಲವನ್ನೂ ಕಾಶ್ಮೀರಿಯೇತರ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದಾರೆ ಎಂದವರು ಆರೋಪಿಸಿದರು.

   ಕಾಶ್ಮೀರಿಗಳ ಅಸ್ಮಿತೆಯನ್ನು ಕಿತ್ತುಕೊಳ್ಳುವುದಕ್ಕಾಗಿಯೇ ಕೇಂದ್ರ ಸರಕಾರದ ನೂತನ ವಾಸ್ತವ್ಯ ಕಾನೂನುಗಳನ್ನು ಜಾರಿಗೊಳಿಸಿದೆ ಎಂದು ಇಲ್ತಿಜಾ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸುವ ಉದ್ದೇಶ ಇದಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News