ದೇಶದಲ್ಲಿ ಮತ್ತೆ 52 ಸಾವಿರ ಹೊಸ ಕೊರೋನ ಪ್ರಕರಣ: ಒಂದೇ ದಿನ 32,371 ಮಂದಿ ಗುಣಮುಖ

Update: 2020-07-30 03:44 GMT

ಹೊಸದಿಲ್ಲಿ: ಆಂಧ್ರಪ್ರದೇಶದಲ್ಲಿ ಒಂದೇ ದಿನ 10 ಸಾವಿರ ಕೊರೋನ ಪ್ರಕರಣಗಳು ಸೇರಿದಂತೆ ದೇಶಾದ್ಯಂತ ಬುಧವಾರ 52 ಸಾವಿರಕ್ಕೂ ಅಧಿಕ ಕೊರೋನ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣಗಳು ಒಂದೇ ದಿನ ವರದಿಯಾಗಿರುವುದು ಇದೇ ಮೊದಲು. ಅಂತೆಯೇ ಒಂದೇ ದಿನ 10 ಸಾವಿರ ಪ್ರಕರಣ ದಾಖಲಾದ ಎರಡನೇ ರಾಜ್ಯವಾಗಿ ಆಂಧ್ರಪ್ರದೇಶ ಹೊರಹೊಮ್ಮಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಮಾತ್ರ ಇಷ್ಟೊಂದು ಸಂಖ್ಯೆಯ ಪ್ರಕರಣ ವರದಿಯಾಗಿತ್ತು.

10,093 ಹೊಸ ಪ್ರಕರಣಗಳೊಂದಿಗೆ ಆಂಧ್ರಪ್ರದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,20,390ಕ್ಕೇರಿದೆ. 1,33,310 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ದೆಹಲಿಯನ್ನು ಮೀರಿಸುವ ಎಲ್ಲ ಸಾಧ್ಯತೆ ಇದೆ.

ಅಂತೆಯೇ ಬುಧವಾರ ದೇಶಾದ್ಯಂತ 771 ಮಂದಿ ಸೋಂಕಿತರು ಮೃತಪಟ್ಟಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 35 ಸಾವಿರದ ಸನಿಹಕ್ಕೆ ಬಂದಿದೆ. ಆಂಧ್ರದಲ್ಲಿ 65 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 1213ಕ್ಕೇರಿದೆ.

ದೇಶದಲ್ಲಿ ಬುಧವಾರ ದಾಖಲಾದ 52,898 ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 15,83,483ಕ್ಕೇರಿದೆ. ಈ ಪೈಕಿ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಕಳೆದ 29 ದಿನಗಳಲ್ಲಿ ವರದಿಯಾಗಿವೆ. ಭಾರತದಲ್ಲಿ ಸೊಂಕು ಕಾಣಿಸಿಕೊಂಡ ಬಳಿಕ ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 63ರಷ್ಟು ಪ್ರಕರಣಗಳು ಈ ತಿಂಗಳು ವರದಿಯಾಗಿವೆ. ದೇಶದಲ್ಲಿ ಒಟ್ಟು 34,950 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅರ್ಧಕ್ಕೂ ಹೆಚ್ಚು ಸಾವು ಜುಲೈ ತಿಂಗಳಲ್ಲೇ ವರದಿಯಾಗಿದೆ.

ಕಳೆದ 24 ಗಂಟೆಗಳಲ್ಲಿ 32,371 ಮಂದಿ ಗುಣಮುಖರಾಗಿದ್ದು, ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 10,19,083ಕ್ಕೇರಿದೆ. 9211 ಹೊಸ ಪ್ರಕರಣಗಳೊಂದಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಲಕ್ಷದ ಗಡಿ ದಾಟಿದೆ. 4,00,651 ಪ್ರಕರಣಗಳೊಂದಿಗೆ ಮಹಾರಾಷ್ಟ್ರದ ಒಟ್ಟು ಪ್ರಕರಣಗಳ ಸಂಖ್ಯೆ ಮೆಕ್ಸಿಕೋ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆಯ ಸನಿಹಕ್ಕೆ ಬಂದಿದೆ. ವಿಶ್ವದಲ್ಲಿ ಆರನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು (4,02,697) ಮೆಕ್ಸಿಕೋದಲ್ಲಿ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News