ನಾಯಕತ್ವ ಬದಲಾವಣೆ ಅನಗತ್ಯ

Update: 2020-07-30 19:30 GMT

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಕುರಿತಂತೆ ಒಂದೆಡೆ ಚರ್ಚೆ ನಡೆಯುತ್ತಿರುವಾಗಲೇ ಇನ್ನೊಂದೆಡೆ ಬಿಜೆಪಿಯ ನಾಯಕರು ‘‘ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಪೂರೈಸುತ್ತಿರುವಂತೆಯೇ, ಒಂದು ಬಣ ‘ನಾಯಕತ್ವ ಬದಲಾವಣೆ’ಯ ಪ್ರಸ್ತಾವ ಇಟ್ಟಿತ್ತು. ಸರಕಾರ ರಚನೆಯ ಸಂದರ್ಭದಲ್ಲಾದ ಒಪ್ಪಂದದ ಅನುಸಾರವಾಗಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು, ಇನ್ನೊಬ್ಬರಿಗೆ ಅಧಿಕಾರ ಹಸ್ತಾಂತರಿಸಬೇಕು ಎನ್ನುವ ಆಗ್ರಹವೊಂದು ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಸವದಿ, ನಳಿನ್ ಕುಮಾರ್, ಸಂತೋಷ್ ಮೊದಲಾದವರ ಹೆಸರುಗಳೂ ತೇಲಿ ಬಂದಿದ್ದವು. ಇದಕ್ಕೆ ಪೂರಕವಾಗಿ ವಿರೋಧ ಪಕ್ಷ ಕೊರೋನ ಅವ್ಯವಹಾರ ಪ್ರಕರಣವನ್ನು ಸ್ಫೋಟಿಸಿತ್ತು. ಈ ಅವ್ಯವಹಾರದ ದಾಖಲೆಗಳನ್ನು ವಿರೋಧ ಪಕ್ಷದ ನಾಯಕರ ಕೈಗೆ ನೀಡಿರುವುದೇ ಬಿಜೆಪಿಯೊಳಗಿರುವ ಯಡಿಯೂರಪ್ಪ ನಾಯಕತ್ವದ ವಿರೋಧಿಗಳು ಎಂಬ ಆರೋಪಗಳಿವೆ.

ಒಟ್ಟಿನಲ್ಲಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಬಿಜೆಪಿಯೊಳಗೆ ಸದ್ದಿಲ್ಲದೆ ಪ್ರಯತ್ನವೊಂದು ನಡೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಮತ್ತು ಆ ಪ್ರಯತ್ನದ ಹಿಂದೆ ಸಂತೋಷ್ ನೇತೃತ್ವದ ಆರೆಸ್ಸೆಸ್ ಸಕ್ರಿಯವಾಗಿದೆ ಎನ್ನುವುದೂ ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಯಾಕೆಂದರೆ, ಬಿಜೆಪಿಯನ್ನು ಯಡಿಯೂರಪ್ಪ ಅವರಿಂದ ಮುಕ್ತಗೊಳಿಸಿ ಅದನ್ನು ಸಂಪೂರ್ಣ ತನ್ನ ಕೈವಶ ಮಾಡಿಕೊಳ್ಳುವ ಆರೆಸ್ಸೆಸ್‌ನ ಪ್ರಯತ್ನಕ್ಕೆ ದಶಕಗಳ ಇತಿಹಾಸವಿದೆ. ಈ ಹಿಂದೆ ಅನಂತಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸಿದ್ದ ಆರೆಸ್ಸೆಸ್, ಬಳಿಕ ಆ ಸ್ಥಾನಕ್ಕೆ ಸಂತೋಷ್ ಅವರನ್ನು ತರಲು ಹವಣಿಸಿತು. ಇದೊಂದು ರೀತಿ ಬಿಜೆಪಿಯೊಳಗಿನ ‘ಬ್ರಾಹ್ಮಣ್ಯ-ಲಿಂಗಾಯತ ಶಕ್ತಿ ರಾಜಕಾರಣ’ದ ಸಂಘರ್ಷವಾಗಿ ಬೆಳೆದು ಬಂದಿದೆ. ಯಡಿಯೂರಪ್ಪ ಅವರ ಹಿಂದಿರುವ ಲಿಂಗಾಯತ ಶಕ್ತಿಯಿಂದಾಗಿಯೇ ಆರೆಸ್ಸೆಸ್ ಈ ಪ್ರಯತ್ನದಲ್ಲಿ ಪ್ರತಿ ಸಲ ವಿಫಲವಾಗುತ್ತಾ ಬಂದಿದೆ. ಈ ಬಾರಿಯೂ ಅಂತಹದೊಂದು ಸಣ್ಣ ಪ್ರಯತ್ನಕ್ಕೆ ಇಳಿದು ಆರೆಸ್ಸೆಸ್ ಕೈ ಸುಟ್ಟುಗೊಂಡಂತಿದೆ.

ಯಡಿಯೂರಪ್ಪ ಒಂದು ವರ್ಷದ ಆಳ್ವಿಕೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾರೆ? ಎನ್ನುವ ಚರ್ಚೆಯನ್ನು ಬಿಜೆಪಿಯೊಳಗಿರುವ ಕೆಲವು ಶಕ್ತಿಗಳೇ ಮುನ್ನೆಲೆಗೆ ತರುತ್ತಿವೆ. ಸದ್ಯದ ಆಡಳಿತದ ವೈಫಲ್ಯವನ್ನೆಲ್ಲ ಯಡಿಯೂರಪ್ಪ ಅವರ ತಲೆಗೆ ಕಟ್ಟುವ ಹುನ್ನಾರ ಇದರ ಹಿಂದಿದೆ. ನೆರೆ ಪರಿಹಾರಕ್ಕೆ ಸಂಬಂಧಿಸಿ ಯಡಿಯೂರಪ್ಪ ಕೇಂದ್ರದಿಂದ ಅನುದಾನವನ್ನು ಅಪೇಕ್ಷಿಸಿದಾಗ ಇದೇ ಬಿಜೆಪಿಯೊಳಗಿರುವ ಸಂಸದರೇ ‘ಅನುದಾನದ ಅಗತ್ಯವಿಲ್ಲ, ರಾಜ್ಯದ ಬೊಕ್ಕಸದಲ್ಲಿ ಬೇಕಾದಷ್ಟು ನಿಧಿಯಿದೆ’ ಎಂಬ ಹೇಳಿಕೆ ನೀಡಿ ಯಡಿಯೂರಪ್ಪ ಅವರಿಗೆ ಅಡ್ಡಗಾಲು ಹಾಕಿದ್ದರು. ರಾಜ್ಯದ ಸಂಸದರೆಲ್ಲರೂ ಒಂದಾಗಿ ಕೇಂದ್ರಕ್ಕೆ ಒತ್ತಡ ಹೇರಿದ್ದರೆ, ನೆರೆ ಪರಿಹಾರ ಮಾತ್ರವಲ್ಲ, ಜಿಎಸ್‌ಟಿ ಪರಿಹಾರ ನಿಧಿಯೂ ಇದೀಗ ರಾಜ್ಯದ ಬೊಕ್ಕಸ ಸೇರಿಯಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅದರಿಂದ ರಾಜ್ಯಗಳಿಗೆ ಹೆಚ್ಚು ಲಾಭ ಎಂಬ ನಂಬಿಕೆಯಿತ್ತು. ಕೇಂದ್ರ ಸರಕಾರಕ್ಕೆ ಕರ್ನಾಟಕ ಅತ್ಯಧಿಕ ಸಂಸದರನ್ನು ನೀಡಿದ ರಾಜ್ಯ. ಈ ಕರ್ನಾಟಕವನ್ನು ಕೇಂದ್ರ ಸರಕಾರ ವಿಶೇಷ ಅನುಕಂಪದಿಂದ ನೋಡಬೇಕಾಗಿತ್ತು. ದುರದೃಷ್ಟವಶಾತ್, ರಾಜ್ಯಕ್ಕೆ ಸಿಗಬೇಕಾದ ಹಕ್ಕಿನ ಹಣವನ್ನೇ ಕೇಳುವುದಕ್ಕೆ ಬಿಜೆಪಿ ಸಂಸದರು ಹಿಂಜರಿದರು. ರಾಜ್ಯದ ಹಿತಾಸಕ್ತಿಗಿಂತ ಮೋದಿ ಓಲೈಕೆಯೇ ಕೆಲವರಿಗೆ ಮುಖ್ಯವಾಯಿತು. ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಕೊರೋನ ಕಾಲಿಟ್ಟಿತು.

ಕೇಂದ್ರದ ಯಾವ ಸಹಕಾರ ಇಲ್ಲದೇ ಇದ್ದರೂ, ಯಡಿಯೂರಪ್ಪ ನೇತೃತ್ವದಲ್ಲಿ ಇದನ್ನು ಎದುರಿಸುವ ಕಾರ್ಯಯೋಜನೆ ರೂಪಿಸಲಾಯಿತು. ಇಂದು ಉತ್ತರಪ್ರದೇಶವೂ ಸೇರಿದಂತೆ ಹಲವು ಬಿಜೆಪಿ ಸರಕಾರಗಳಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಎಷ್ಟೋ ವಾಸಿ. ದಿವಾಳಿಯಾಗಿರುವ ಬೊಕ್ಕಸವನ್ನು ಹಿಡಿದುಕೊಂಡು ಕರ್ನಾಟಕ ಇಷ್ಟನ್ನಾದರೂ ಸಾಧಿಸಿದ್ದು ಅಚ್ಚರಿ ಹುಟ್ಟಿಸುತ್ತದೆ. ಬಹುಶಃ ಯಡಿಯೂರಪ್ಪರ ಸುದೀರ್ಘ ರಾಜಕೀಯ ಅನುಭವ, ಮುತ್ಸದ್ದಿತನ ಇದಕ್ಕೆ ಕಾರಣವಾಗಿರಬಹುದು. ತನ್ನದೇ ಪಕ್ಷದೊಳಗಿನ ಕಿರುಕುಳವನ್ನು ಸಹಿಸಿಕೊಂಡು, ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತಾ ಒಂದು ವರ್ಷ ಪೂರೈಸಿದ್ದು ಯಡಿಯೂರಪ್ಪರ ಸಣ್ಣ ಸಾಧನೆಯೇನೂ ಅಲ್ಲ. ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಬದಲಾಯಿಸಲು ಬಿಜೆಪಿಯೊಳಗಿರುವ ಅತಿ ದೊಡ್ಡ ಸಮಸ್ಯೆಯೆಂದರೆ, ಅವರಿಗೆ ಪರ್ಯಾಯವಾಗಬಲ್ಲ ನಾಯಕರು ಅಲ್ಲಿಲ್ಲದಿರುವುದು.

ಈ ಹಿಂದೆ ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ, ಬದಲಿಗೆ ಸದಾನಂದ ಗೌಡ, ಶೆಟ್ಟರ್ ಹೀಗೆ ಎರಡೆರಡು ಮುಖ್ಯಮಂತ್ರಿ, ಎರಡೆರಡು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕಾಯಿತು. ಬಳಿಕ, ಯಡಿಯೂರಪ್ಪ ಬಿಜೆಪಿಯನ್ನು ತೊರೆದದ್ದೇ, ಕರ್ನಾಟಕದಲ್ಲಿ ಬಿಜೆಪಿ ಭಾರೀ ಸೋಲನ್ನು ಅನುಭವಿಸಬೇಕಾಯಿತು. ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗೆ ಯಡಿಯೂರಪ್ಪ ಅವರೇ ಬೇಕಾಯಿತು ಮಾತ್ರವಲ್ಲ, ಅವರನ್ನೇ ಮುಖ್ಯಮಂತ್ರಿಯಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಲಿಂಗಾಯತ ಸಮುದಾಯದ ಶಕ್ತಿ ಯಡಿಯೂರಪ್ಪ ಬಳಿಯಿದೆ ಎನ್ನುವುದಷ್ಟೇ ಅಲ್ಲ, ಅವರಿಗೆ ರೈತ ಪರವಾದ ರಾಜಕೀಯ ಹೋರಾಟದ ಸುದೀರ್ಘ ಹಿನ್ನೆಲೆಯಿದೆ. ಉಳಿದ ನಾಯಕರಂತೆ ಅವರು ಕೋಮುವಿಷವನ್ನು ಹರಡುತ್ತಾ ರಾಜಕೀಯವಾಗಿ ಬೆಳೆದವರಲ್ಲ. ಹಲವು ದಶಕಗಳ ರಾಜಕೀಯ ಏಳು ಬೀಳುಗಳ ಮೂಲಕ ರೂಪುಗೊಂಡವರು. ಈ ನಾಡಿನ ಹಲವು ಹಿರಿಯ ಮುತ್ಸದ್ದಿಗಳ ಒಡನಾಟಗಳಿಂದ ಅವರ ರಾಜಕೀಯ ಚಿಂತನೆಗಳು ರೂಪುಗೊಂಡಿವೆ. ಈ ಕಾರಣದಿಂದಲೇ, ಯಡಿಯೂರಪ್ಪರ ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡುವ ಧೈರ್ಯ ಬಿಜೆಪಿಯೊಳಗಿರುವ ಯಾವುದೇ ಭಿನ್ನಮತೀಯರಿಗಿಲ್ಲ. ಅವರ ರಾಜಕೀಯವೇನಿದ್ದರೂ ಆರೆಸ್ಸೆಸ್‌ನ ಒಳಮನೆಯೊಳಗೆ.

ಜೊತೆಗೆ ಕೊರೋನ, ಲಾಕ್‌ಡೌನ್‌ನಿಂದ ತತ್ತರಿಸಿ ಕೂತಿರುವ ಕರ್ನಾಟಕದ ನಾಯಕತ್ವವನ್ನು ಕೈಗೆತ್ತಿಕೊಳ್ಳುವ ಧೈರ್ಯವೂ ಸದ್ಯಕ್ಕೆ ಬಿಜೆಪಿಯೊಳಗಿರುವ ಯಾವುದೇ ನಾಯಕರಿಗಿಲ್ಲ. ಇಂದು ಯಡಿಯೂರಪ್ಪರನ್ನು ಕೆಳಗಿಳಿಸಿ ಯಾವುದೇ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದರೂ ಆ ನಾಯಕನ ಹೆಸರಲ್ಲಿ ಅಧಿಕಾರ ನಡೆಸಲಿರುವುದು ಆರೆಸ್ಸೆಸ್ ಮುಖಂಡರೇ ಆಗಿರುತ್ತಾರೆ. ಯಡಿಯೂರಪ್ಪರನ್ನು ಕೆಳಗಿಳಿಸಿ ತಮ್ಮ ಸೂತ್ರಕ್ಕೆ ಕುಣಿಯುವ ನಾಯಕನೊಬ್ಬನನ್ನು ಆ ಸ್ಥಾನಕ್ಕೆ ತರುವ ಸಂಚು ಆರೆಸ್ಸೆಸ್ ನಡೆಸಿತಾದರೂ, ಕೇಂದ್ರದ ವರಿಷ್ಠರ ಬೆಂಬಲವಿಲ್ಲದೆ ಅದು ಹಿಂದೆ ಸರಿಯಬೇಕಾಯಿತು. ಆರೆಸ್ಸೆಸ್ ಪ್ರಯತ್ನದ ವಿರುದ್ಧ ನಾಯಕರಿಗೆ ಯಡಿಯೂರಪ್ಪ ಬಣ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ ಎನ್ನುವ ವದಂತಿಗಳಿವೆ. ಈ ಕಾರಣದಿಂದಲೇ, ಬಿಜೆಪಿಯ ನಾಯಕರು ಪದೇ ಪದೇ ‘ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎನ್ನುತ್ತಿದ್ದಾರೆ. ಅಂದರೆ ಯಡಿಯೂರಪ್ಪ ಅವರನ್ನು ಅವಧಿ ಮುಗಿಯುವ ಮೊದಲೇ ಕೆಳಗಿಳಿಸಿದರೆ ಅವರು ಮತ್ತೊಮ್ಮೆ ಬಂಡಾಯವೇಳುವ, ಬಿಜೆಪಿಯನ್ನು ಒಡೆಯುವ ಅಪಾಯವನ್ನು ವರಿಷ್ಠರು ಮನಗಂಡಿದ್ದಾರೆ. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರನ್ನೇ ಉಳಿಸಿ ಅವರಿಗೆ ಗೌರವಯುತ ವಿದಾಯ ಹೇಳಲು ಬಿಜೆಪಿ ನಿರ್ಧರಿಸಿದಂತಿದೆ. ಆದರೆ, ಮೂರು ವರ್ಷಗಳ ಬಳಿಕ ಯಡಿಯೂರಪ್ಪ ರಾಜಕೀಯ ನಿವೃತ್ತಿಯನ್ನು ಒಪ್ಪಿಕೊಳ್ಳುತ್ತಾರೆಯೇ ಅಥವಾ ಅವರು ತನ್ನ ಬೆನ್ನಿಗಿರುವ ಲಿಂಗಾಯತ ಶಕ್ತಿಯನ್ನು ಬಳಸಿಕೊಂಡು ಪರ್ಯಾಯ ಸರಕಾರವೊಂದಕ್ಕೆ ಅಡಿಪಾಯ ಹಾಕುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News