ಭೂಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ವ್ಯತಿರಿಕ್ತ ಪರಿಣಾಮ ಬೀರದು: ಸಚಿವ ಮಾಧುಸ್ವಾಮಿ

Update: 2020-08-01 17:51 GMT

ಬೆಂಗಳೂರು, ಆ.1: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮಗಳು ಇರುವುದಿಲ್ಲ ಅಥವಾ ರೈತರ ಹಿತಾಸಕ್ತಿಗೆ ಧಕ್ಕೆ ತರುವಂತದ್ದಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ವಿಶ್ವವಿದ್ಯಾಲಯ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕರ್ನಾಟಕ ಭೂಸುಧಾರಣೆ (ತಿದ್ದುಪಡಿ) ಅಧ್ಯಾದೇಶ 2020: ಸಾಧಕ ಹಾಗೂ ಬಾಧಕಗಳು ವಿಷಯದ ಕುರಿತು ಆನ್‍ಲೈನ್ ಸಂವಾದ ಹಾಗೂ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೇರೆ ರಾಜ್ಯಗಳನ್ನ ನಾವು ಅವಲೋಕನ ಮಾಡಿದಾಗ ನಮ್ಮ ರಾಜ್ಯದಲ್ಲೇ, ಕೃಷಿಯೇತರರಿಗೆ ಭೂ ಖರೀದಿ ಮಾಡುವ ಅವಕಾಶ ನೀಡುವುದಿಲ್ಲ. ಆದರೆ ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು ಹೀಗೆ ಹಲವು ರಾಜ್ಯಗಳಿಂದ ಬರುವ ಜನರು ಅವರ ರಾಜ್ಯಗಳ ಪಾಣಿಗಳನ್ನು ತೋರಿಸಿ, ನಮ್ಮ ರಾಜ್ಯದ ಕೃಷಿ ಭೂಮಿಯನ್ನು ಖರೀದಿಸುವ ಸಂದರ್ಭದಲ್ಲಿ, ನಮ್ಮ ರಾಜ್ಯದ ಜನರಿಗೆ ಕೃಷಿ ಭೂಮಿ ಖರೀದಿಸುವ ಹಕ್ಕನ್ನು ಕೊಡುವುದರಲ್ಲಿ ಏನು ತಪ್ಪಿದೆ ಎಂದು ತಿಳಿಸಿದರು.

ಪಿಟಿಸಿಎಲ್ ಜಮೀನುಗಳನ್ನು ಬಿಟ್ಟು, ಬೇರೆ ಯಾವುದೇ ರೈತರ ಜಮೀನುಗಳನ್ನು ಖರೀದಿ ಮಾಡಲು ಕಾಯ್ದೆಯಲ್ಲಿ ಅವಕಾಶ ಕೊಟ್ಟಿದೆ. ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರದಿಂದ ಕೃಷಿ ಚಟುವಟಿಕೆಗಳ ಎಲ್ಲಾ ವಿಚಾರಗಳನ್ನು ಕೂಲಂಕಷವಾಗಿ ತಿಳಿದುಕೊಂಡು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸರಕಾರ ಸಂಸ್ಥೆಗಳಾದ ಕರ್ನಾಟಕ ಸಂಸದೀಯ ಸುಧಾರಣಾ ಸಂಸ್ಥೆ ಆಯೋಜಿಸಬೇಕಾಗಿದ್ದ ಈ ರೀತಿಯ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕಾನೂನು ಕಾಲೇಜು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶ್ಲಾಘಿಸಿದರು.

ವಿರೋಧ ಪಕ್ಷದವರಾದ ನಾವು ಏನೇ ಮಾತನಾಡಿದರು ಆಳುವ ಸರಕಾರಗಳು ನಮ್ಮ ಟೀಕೆಗೆ ಬಾಲಿಶ ಉತ್ತರ ಕೊಟ್ಟರೆ ಹೊರತು ರೈತರ ಹಿತಾಸಕ್ತಿಯನ್ನು ಹಾಗೂ ಅವರ ಜೀವನಕ್ರಮವನ್ನು ಅಭಿವೃದ್ಧಿ ಪಡಿಸುವಂತಹ ಪಾಲಿಸಿಗಳನ್ನು ಸಿದ್ಧಪಡಿಸಲಿಲ್ಲ. 1974 ತಿದ್ದುಪಡಿ ನಂತರ ಎಲ್ಲ ಸರಕಾರಗಳು ಭೂ ಸುಧಾರಣೆ ಕಾಯ್ದೆಯನ್ನು ತಿರುಚುವ ಪ್ರಯತ್ನ ಮಾಡಿದರು. ಅದರಲ್ಲಿ ಇಂದಿನ ಆಳುವ ಸರಕಾರ ಯಶಸ್ವಿಯಾಗಿ ತಿದ್ದುಪಡಿ ತಂದೇ ಬಿಟ್ಟರು ಎಂದರು.

ಊರಿನ ಊರುಗೋಲನ್ನು ಕಿತ್ತು ಜಮೀನು ಅತಿಯಾಗಿ ಉಳ್ಳವರಿಗೆ ಕೊಟ್ಟಿರುವುದು ನಿಜಕ್ಕೂ ಶೋಚನೀಯ. ಬರ, ಪ್ರವಾಹ, ಮಾರುಕಟ್ಟೆ ಶೋಷಣೆ ಇವೆಲ್ಲ ತೊಂದರೆಗಳಿಗೆ ರೈತರು ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಅವಶ್ಯಕತೆ ಬೇಕಾಗಿತ್ತೆ ಎಂದು ಪ್ರಶ್ನೆ ಹಾಕಿದರು.

ಕೊರೋನ ಮಹಾಮಾರಿ ಒಕ್ಕರಿಸಿದ ಸಂದರ್ಭದಲ್ಲಂತೂ ರೈತರು ಮೂಲೆಗುಂಪಾದರು. ಇದರ ಜೊತೆಗೆ ಈ ತಿದ್ದುಪಡಿಯಿಂದ ರೈತರನ್ನು ಬಾಂಡಲಿಯಿಂದ ಬೆಂಕಿಗೆ ಹಾಕಿದಂತಾಯಿತು. ಖರೀದಿ ಮಾಡುವವನಿಗೆ ಅನುಕೂಲ ಮಾಡಿದರೆ ರೈತರ ಹಿತರಕ್ಷಣೆ ಹೇಗೆ ತಾನೆ ಕಾಯಲು ಸಾಧ್ಯ. ಭೂಮಿತಾಯಿ, ಅನ್ನದಾತೆ ಹಾಗು ಆಶ್ರಯದಾತೆ. ಈ ತಾಯಿಯನ್ನು ರೈತರು ನಂಬಿಕೊಂಡು ಬಂದಿರುವುದರಿಂದ ಅವರಿಗೆ ಉತ್ತಮ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸುವುದನ್ನು ಬಿಟ್ಟು ಈ ರೀತಿಯ ತಿದ್ದುಪಡಿಗೆ ಕೈಹಾಕಿರುವುದು ಎಷ್ಟು ಸಮಂಜಸ ಎಂದು ತಿಳಿಸಿದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ಈ ಭೂ ಸುಧಾರಣೆ ತಿದ್ದುಪಡಿ ಅಧ್ಯಾದೇಶವನ್ನು ಪೂರ್ವಾನ್ವಯವಾಗಿ ಮಾಡಿರುವುದು ಭೂಗಳ್ಳರ ಹಾಗೂ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.

ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತರಾತುರಿಯಲ್ಲಿ ಹೊರಡಿಸುವ ಅನಿವಾರ್ಯತೆ ಏನು ಹಾಗೂ ಈ ಒಂದು ತಿದ್ದುಪಡಿಯಿಂದ ಸುಮಾರು 13,894 ಭೂಸುಧಾರಣಾ ಮೊಕದ್ದಮೆಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಕೋವಿಡ್ ಶವಯಾತ್ರೆ ಬಗ್ಗೆ ಗಮನ ವಹಿಸದೆ ಸರಕಾರಗಳು ಈ ರೀತಿಯ ಸಂವಿಧಾನ ವಿರೋಧಿ ತಿದ್ದುಪಡಿಯನ್ನು ತಂದಿರುವುದು ನಿಜಕ್ಕೂ ದುರದೃಷ್ಟಕರ ಎಂದು ತಿಳಿಸಿದರು.

ಕೋ-ಆಪರೇಟಿವ್ ಸೊಸೈಟಿಗಳು ಸಾವಿರಾರು ಎಕರೆಗಳನ್ನು ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಹಿಂದಿನ ಕಾಯ್ದೆ ಉಲ್ಲಂಘನೆ ಮಾಡಿ ಖರೀದಿ ಮಾಡಿದ್ದ ಭೂಮಿಗೆ, ಈ ತಿದ್ದುಪಡಿಯಿಂದ ಕಾನೂನೀಕರಣ ಮಾಡಿ ಅವುಗಳನ್ನು ರಕ್ಷಿಸುವ ಪ್ರಯತ್ನ ಈ ಸರಕಾರ ಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಹೈಕೋರ್ಟ್‍ನ ವಕೀಲರು ಅಶೋಕ್ ಹಾರನಹಳ್ಳಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News