ಸಿಎಎ ನಿಯಮ ರೂಪಿಸಲು 3 ತಿಂಗಳ ಹೆಚ್ಚುವರಿ ಅವಧಿ ಕೋರಿದ ಗೃಹ ಇಲಾಖೆ

Update: 2020-08-02 17:20 GMT

ಹೊಸದಿಲ್ಲಿ, ಆ.2: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ನಿಯಮಗಳನ್ನು ರೂಪಿಸಲು 3 ತಿಂಗಳ ಹೆಚ್ಚುವರಿ ಅವಕಾಶ ನೀಡಬೇಕೆಂದು ಗೃಹ ಸಚಿವಾಲಯ ಕೋರಿದೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಅವಧಿ ವಿಸ್ತರಣೆ ಕೋರಿದ ಅರ್ಜಿಯನ್ನು ಅಧೀನ ಶಾಸನಕ್ಕಾಗಿ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಎದುರು ಸಲ್ಲಿಸಲಾಗಿದೆ. ಯಾವುದೇ ಕಾನೂನಿಗೆ ರಾಷ್ಟ್ರಪತಿಯ ಅಂಕಿತ ದೊರೆತ 6 ತಿಂಗಳೊಳಗೆ ಕಾನೂನಿನ ನಿಯಮವನ್ನು ರೂಪಿಸಬೇಕು ಅಥವಾ ಹೆಚ್ಚುವರಿ ಅವಧಿ ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಗರಿಷ್ಟ 3 ತಿಂಗಳು ಅವಧಿ ವಿಸ್ತರಿಸಬಹುದು. ಹೆಚ್ಚುವರಿ ಸಮಯದ ಅಗತ್ಯಬಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಕಲ್ಪಿಸುವ ಈ ವಿವಾದಾತ್ಮಕ ಮಸೂದೆಗೆ ಲೋಕಸಭೆಯಲ್ಲಿ 2019ರ ಡಿಸೆಂಬರ್ 9ರಂದು ಹಾಗೂ ರಾಜ್ಯಸಭೆಯಲ್ಲಿ 2019ರ ಡಿಸೆಂಬರ್ 11ರಂದು ಅನುಮೋದನೆ ದೊರಕಿತ್ತು. 2019ರ ಡಿಸೆಂಬರ್ 12ರಂದು ರಾಷ್ಟ್ರಪತಿ ಸಹಿ ಹಾಕಿದ್ದರು. ಹೊಸ ಕಾನೂನಿನ ನಿಯಮದ ಬಗ್ಗೆ ಸಮಿತಿ ವಿಚಾರಿಸಿದ ಹಿನ್ನೆಲೆಯಲ್ಲಿ, ನಿಯಮ ರೂಪಿಸಲು ಹೆಚ್ಚುವರಿ ಅವಧಿ ಕೋರಿ ಗೃಹ ಇಲಾಖೆ ಅರ್ಜಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News