ಭಾರತ-ಚೀನಾ ಕಮಾಂಡರ್ ಮಟ್ಟದ ಸಭೆ: ಪೂರ್ವ ಲಡಾಖ್‌ನಲ್ಲಿ ಯಥಾಸ್ಥಿತಿ ಸ್ಥಾಪನೆಗೆ ಭಾರತದ ಆಗ್ರಹ

Update: 2020-08-02 17:25 GMT

ಹೊಸದಿಲ್ಲಿ, ಆ.2: ಲಡಾಖ್ ಗಡಿಭಾಗದಲ್ಲಿ ನೆಲೆಸಿರುವ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಸೇನಾಪಡೆಗಳನ್ನು ವಾಸ್ತವಿಕ ನಿಯಂತ್ರಣ ರೇಖೆಯಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಉಭಯ ಸೇನೆಗಳ ಕಮಾಂಡರ್ ಮಟ್ಟದಲ್ಲಿ ನಡೆದ 5ನೇ ಸುತ್ತಿನ ಮಾತುಕತೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

   ಈ ಮಧ್ಯೆ, ಪೂರ್ವ ಲಡಾಖ್ ಹಾಗೂ ಪಾಂಗ್ಯಾಂಗ್ ತ್ಸೊ ಪ್ರದೇಶದಲ್ಲಿ ಮೇ ತಿಂಗಳಿಗೂ ಹಿಂದೆ ಇದ್ದ ಯಥಾಸ್ಥಿತಿ ಮರುಸ್ಥಾಪನೆಯಾಗಲೇ ಬೇಕು ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ ಎಂದು ವರದಿಯಾಗಿದೆ. ಮಾತುಕತೆಯಲ್ಲಿ ಭಾರತದ ನಿಯೋಗವನ್ನು ಲೇಹ್ ಸೇನಾನೆಲೆಯ 14 ಕಾರ್ಪ್ಸ್ ವಿಭಾಗದ ಕಮಾಂಡರ್ ಲೆಜ ಹರೀಂದರ್ ಸಿಂಗ್ ಮುನ್ನಡೆಸಿದ್ದರೆ ಚೀನಾದ ನಿಯೋಗದ ನೇತೃತವನ್ನು ದಕ್ಷಿಣ ಕ್ಸಿನಿಜಾಂಗ್ ಮಿಲಿಟರಿ ವಿಭಾಗದ ಕಮಾಂಡರ್ ಲೆಜ ಲಿಯು ಲಿನ್ ವಹಿಸಿದ್ದರು. ಪ್ಯಾಂಗಾಂಗ್, ದೆಪ್ಸಾಂಗ್ ಸೇರಿದಂತೆ ಬಿಕ್ಕಟ್ಟು ಸೃಷ್ಟಿಯಾಗಿರುವ ಎಲ್ಲಾ ಪ್ರದೇಶಗಳಿಂದ ಕಾಲಮಿತಿಗೆ ಒಳಪಟ್ಟು ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಒಂದು ಸೂತ್ರವನ್ನು ಅಂತಿಮಗೊಳಿಸಲು ಮಾತುಕತೆಯ ಸಂದರ್ಭ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 ಲಡಾಖ್‌ನಲ್ಲಿ ಭಾರತ-ಚೀನಾ ಪಡೆಗಳ ಮಧ್ಯೆ ಮೇ 5ರಂದು ಹಿಂಸಾತ್ಮಕ ಘರ್ಷಣೆ ನಡೆದ ಬಳಿಕ, ಪರಿಸ್ಥಿತಿ ತಿಳಿಗೊಳಿಸಲು ಉಭಯ ಸೇನಾಪಡೆಗಳ ಮಧ್ಯೆ ಈಗಾಗಲೇ 4 ಸುತ್ತಿನ ಮಾತುಕತೆ ನಡೆದಿದೆ. ಗಲ್ವಾನ್ ಕಣಿವೆ ಪ್ರದೇಶ ಹಾಗೂ ಇತರ ಕೆಲವು ಪ್ರದೇಶಗಳಿಂದ ಚೀನೀ ಪಡೆ ಹಿಂದಕ್ಕೆ ಸರಿದಿದ್ದರೂ ಪ್ಯಾಂಗಾಂಗ್‌ನಲ್ಲಿ ಚೀನೀ ಪಡೆ ಹಿಂದಕ್ಕೆ ಸರಿಯದಿರುವುದು ಉಪಗ್ರಹದಿಂದ ಲಭಿಸಿದ ಚಿತ್ರಗಳಿಂದ ಸ್ಪಷ್ಟವಾಗಿದೆ.

ಪ್ಯಾಂಗಾಂಗ್‌ನಿಂದ ಹಿಂದೆ ಸರಿಯಲು ಚೀನೀ ಸೇನೆ ನಕಾರ

ಲಡಾಖ್ ಗಡಿ ಭಾಗದಲ್ಲಿ ಭಾರತ-ಚೀನಾ ಮಧ್ಯೆ ಉಂಟಾಗಿರುವ ಉದ್ವಿಗ್ನತೆ ನಿವಾರಿಸುವ ನಿಟ್ಟಿನಲ್ಲಿ ಉಭಯ ಸೇನೆಯ ಕಮಾಂಡರ್‌ಗಳ ಮಟ್ಟದಲ್ಲಿ ಮಾತುಕತೆ ಮುಂದುವರಿದಿರುವಂತೆಯೇ, ಪ್ಯಾಂಗಾಂಗ್ ತ್ಸೊ ಪ್ರದೇಶದ ಬಗ್ಗೆ ಮಾತುಕತೆಯಲ್ಲಿ ಪ್ರಸ್ತಾಪಿಸಬಾರದು ಎಂಬ ನಿಲುವಿಗೆ ಅಂಟಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಪ್ಯಾಂಗಾಂಗ್ ತ್ಸೊ ಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಮಾತುಕತೆಯ ವಿಷಯವೇ ಅಲ್ಲ ಎಂದು ಚೀನಾ ಪುನರುಚ್ಚರಿಸಿದೆ. ಉಭಯ ದೇಶಗಳ ಮಧ್ಯೆ ಜೂನ್ 14-15ರಂದು ನಡೆದಿದ್ದ ಮಾತುಕತೆ ಸಂದರ್ಭ ಒಲ್ಲದ ಮನಸ್ಸಿನಿಂದ ಚೀನಾ ಪಾಲ್ಗೊಂಡಿತ್ತು. ಈಗ ಪ್ಯಾಂಗಾಂಗ್ ತ್ಸೊ ಪ್ರದೇಶದಲ್ಲಿ ನಡೆದಿರುವ ಘರ್ಷಣೆಯ ಬಗ್ಗೆ ಮಾತುಕತೆ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸುತ್ತಿದೆ . ಚೀನಾದ ಈ ಬಿಗು ನಿಲುವು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಮೇ ತಿಂಗಳ ಮೊದಲು ಇದ್ದ ಸ್ಥಿತಿ ಸ್ಥಾಪಿಸಲು ಆ ದೇಶ ಸಿದ್ಧವಿಲ್ಲ ಎಂಬ ಸ್ಪಷ್ಟ ಸಂಕೇತವಾಗಿದೆ ಎಂದು ವರದಿ ತಿಳಿಸಿದೆ.

ಮಾತುಕತೆಯಲ್ಲಿ ನಿರ್ಧರಿತವಾದಂತೆ ಗಲ್ವಾನ್ ನದಿ ಕಣಿವೆಯ ಗಸ್ತು ಬಿಂದು 14 ಮತ್ತು ಗಸ್ತು ಬಿಂದು 15ರಿಂದ ಚೀನೀ ಸೇನೆ ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಗೋಗ್ರಾ ಸೇನಾನೆಲೆಯ ಗಸ್ತುಬಿಂದು 17ಎಯಲ್ಲಿ ಸೇನೆಯ ವಾಪಸಾತಿ ಪ್ರಕ್ರಿಯೆ ನಿಧಾನವಾಗಿತ್ತು. ಈ ಮಧ್ಯೆ, ಸೇನೆಯ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಚೀನಾದ ಸೇನೆ ಈಗ ಪ್ಯಾಂಗಾಂಗ್ ಫಿಂಗರ್ ಕಾಂಪ್ಲೆಕ್ಸ್‌ನ ವಾಸ್ತವಿಕ ನಿಯಂತ್ರಣ ರೇಖೆಯ ತನ್ನ ಪ್ರದೇಶದಲ್ಲಿ ನೆಲೆಸಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಹೇಳಿಕೆ ನೀಡಿದ್ದಾರೆ. ಪ್ಯಾಂಗಾಂಗ್‌ನ ಫಿಂಗರ್ 4ರಿಂದ 8ರವರೆಗಿನ ವಿವಾದಿತ ಪ್ರದೇಶದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News