ಆಗಸ್ಟ್ 5ರಿಂದ ತೆರೆಯಲಿರುವ ಜಿಮ್, ಯೋಗ ಕೇಂದ್ರಗಳು: ಮಾರ್ಗಸೂಚಿಗಳನ್ನು ಪ್ರಕಟಿಸಿದ ಸರಕಾರ

Update: 2020-08-03 16:54 GMT

ಹೊಸದಿಲ್ಲಿ, ಆ. 3: ‘ಅನ್‌ಲಾಕ್ 3’ರ ಮೂರನೇ ಹಂತವಾಗಿ ಆರ್ಥಿಕತೆಯನ್ನು ಮರು ಆರಂಭಿಸುವ ಕೇಂದ್ರ ಸರಕಾರದ ವ್ಯವಸ್ಥೆಯ ಭಾಗವಾಗಿ ಜಿಮ್ ಹಾಗೂ ಯೋಗ ಸಂಸ್ಥೆಗಳು ಆಗಸ್ಟ್ 5ರಿಂದ ಸಾರ್ವಜನಿಕರಿಗೆ ಬಾಗಿಲು ತೆರೆಯಲಿವೆ.

ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ದೇಶಾದ್ಯಂತ ಜಿಮ್ ಹಾಗೂ ಯೋಗ ಸಂಸ್ಥೆಗಳನ್ನು ಮರು ಆರಂಭಿಸಲು ಮಾರ್ಗಸೂಚಿ ಹಾಗೂ ಪ್ರಮಾಣಿತ ಕಾರ್ಯ ನಿರ್ವಹಣಾ ವಿಧಾನವನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದೆ.

ಆರೋಗ್ಯಕ್ಕೆ ಯೋಗ ಹಾಗೂ ದೈಹಿಕ ಚಟುವಟಿಕೆಗಳು ಪ್ರಮುಖವಾಗಿರುವುದರಿಂದ ಕೊರೋನ ವೈರಸ್ ಸೋಂಕು ಹರಡವುದನ್ನು ತಡೆಯಲು ಶಿಷ್ಟಾಚಾರದ ವಿವರ ಹಾಗೂ ತಡೆಗಟ್ಟುವ ಕ್ರಮಗಳನ್ನು ಈ ಮಾರ್ಗಸೂಚಿ ಹೊಂದಿದೆ.

 ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ, ಸದಸ್ಯರು ಹಾಗೂ ಸಂದರ್ಶಕರ ನಡುವೆ ಭೌತಿಕ ಸಂಪರ್ಕದ ಸಾಧ್ಯತೆಯನ್ನು ಕಡಿಮೆಗೊಳಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ಸೋಂಕು ತಡೆ ಹಾಗೂ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ಗುರಿಯನ್ನು ಈ ಮಾರ್ಗಸೂಚಿ ಹೊಂದಿದೆ.

ಪ್ರಮುಖ ಮಾರ್ಗಸೂಚಿಗಳು

► ಪ್ರವೇಶದ ಸಂದರ್ಭ ಕೈಗಳನ್ನು ಶುಚಿಗೊಳಿಸುವುದು (ಸ್ಯಾನಿಟೈಸರ್‌ನಿಂದ) ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಕಡ್ಡಾಯ.

► ಕೊರೋನ ರೋಗ ಲಕ್ಷಣ ಇಲ್ಲದ ವ್ಯಕ್ತಿ (ಸಿಬ್ಬಂದಿ)ಗಳಿಗೆ ಮಾತ್ರ ಅವಕಾಶ.

► 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಹಲವು ಕಾಯಿಲೆಗಳು ಇರುವವರು, ಗರ್ಭಿಣಿ ಮಹಿಳೆಯರು ಹಾಗೂ 10ಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಮುಚ್ಚಿದ ಸ್ಥಳದಲ್ಲಿರುವ ಜಿಮ್‌ಗೆ ತೆರಳುವಂತಿಲ್ಲ. ಯೋಗ ಹಾಗೂ ಜಿಮ್ನಾಸಿಯಂ ನಡೆಸುತ್ತಿರುವ ಸಂಸ್ಥೆಗಳು ತನ್ನ ಎಲ್ಲ ಸದಸ್ಯರಿಗೆ, ಸಂದರ್ಶಕರಿಗೆ ಹಾಗೂ ಸಿಬ್ಬಂದಿಗೆ ಸಲಹೆಗಳನ್ನು ನೀಡಬೇಕು.

► ಯೋಗ ಕೇಂದ್ರ ಹಾಗೂ ಜಿಮ್ ಒಳಗಡೆ ಮಾಸ್ಕ್ ಬಳಕೆ ಕಡ್ಡಾಯ. ಆದರೆ, ಜಿಮ್ ಅಥವಾ ಯೋಗ ಮಾಡುವಾಗ ಉಸಿರಾಡಲು ಕಷ್ಟವಾದರೆ, ಎನ್-95 ಮಾಸ್ಕ್‌ಗಳನ್ನು ಬಳಸಬಹುದು.

► ಆರೋಗ್ಯ ಸೇತು ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಎಲ್ಲರಿಗೆ ಸಲಹೆ ನೀಡಬೇಕು.

► ಪ್ರತಿವ್ಯಕ್ತಿ ಸಾಧ್ಯವಾದಷ್ಟು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು.

► ಸದಸ್ಯರು ಹಾಗೂ ಸಂದರ್ಶಕರು ಒಳಬಂದ ಹಾಗೂ ಹೊರ ಹೋದ ಸಮಯವನ್ನು ದಾಖಲಿಸಬೇಕು (ಹೆಸರು, ವಿಳಾಸ ಹಾಗೂ ಪೋನ್ ನಂಬರ್)

► ಯೋಗ ಸಂಸ್ಥೆಯಲ್ಲಿ ಶೂ, ಚಪ್ಪಲಿಗಳನ್ನು ಹೊರಗಿರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News