ಭಾರತದಲ್ಲಿ 2 ಕೋಟಿಗೂ ಹೆಚ್ಚು ಕೊರೋನ ಪರೀಕ್ಷೆ : ಐಸಿಎಂಆರ್

Update: 2020-08-03 16:09 GMT

ಹೊಸದಿಲ್ಲಿ, ಆ.3: ದೇಶದಲ್ಲಿ ಕೊರೋನ ವೈರಸ್ ಸೋಂಕು ಪತ್ತೆಹಚ್ಚಲು ನಡೆಸುವ ಪರೀಕ್ಷೆಯ ಒಟ್ಟು ಪ್ರಮಾಣ 2 ಕೋಟಿ ಗಡಿ ದಾಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೇಳಿದೆ.

ಆಗಸ್ಟ್ 2ರವರೆಗೆ ಒಟ್ಟು 2,02,02,858 ಸ್ಯಾಂಪಲ್‌ ಗಳನ್ನು ಪರೀಕ್ಷಿಸಲಾಗಿದ್ದು, ರವಿವಾರ ಒಂದೇ ದಿನ 3,81,027 ಸ್ಯಾಂಪಲ್ ‌ಗಳ ಪರೀಕ್ಷೆ ನಡೆದಿದೆ. ಜುಲೈ 6ರಂದು ಪರೀಕ್ಷೆಯ ಪ್ರಮಾಣ 1 ಕೋಟಿ ಗಡಿ ದಾಟಿತ್ತು. ದೇಶದಲ್ಲಿ ಈಗ ಖಾಸಗಿ ವಲಯದ 434 ಪ್ರಯೋಗಾಲಯ ಸೇರಿದಂತೆ ಒಟ್ಟು 1,348 ಪ್ರಯೋಗಾಲಯಗಳಿವೆ. ಲಾಕ್‌ಡೌನ್ ಜಾರಿಗೂ ಮುನ್ನ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಏಕೈಕ ಪ್ರಯೋಗಾಲಯವಿದ್ದರೆ, ಲಾಕ್‌ಡೌನ್ ಜಾರಿಯ ಸಂದರ್ಭ ಇದನ್ನು 100ಕ್ಕೆ ವಿಸ್ತರಿಸಲಾಗಿದೆ. ಜೂನ್ 23ರಂದು 1000ನೇ ಪ್ರಯೋಗಾಲಯ ಆರಂಭವಾಗಿತ್ತು ಎಂದು ಐಸಿಎಂಆರ್ ವಿವರಿಸಿದೆ.

52,972 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಭಾರತದ ಕೊರೋನ ಸೋಂಕಿನ ಪ್ರಮಾಣ ಸೋಮವಾರ 18 ಲಕ್ಷ ಗಡಿ ದಾಟಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ 18,03,695 ಆಗಿದ್ದರೆ ಮೃತರ ಸಂಖ್ಯೆ 38,135ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News