ಹಣ ಕಟ್ಟಿ, ಇಲ್ಲದಿದ್ದರೆ ಮೃತದೇಹ ಕೊಡಲ್ಲ ಎಂದ ಬೆಂಗಳೂರಿನ ಆಸ್ಪತ್ರೆ: ಆರೋಪ

Update: 2020-08-03 16:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.3: ನಗರದಲ್ಲಿ ಸೋಮವಾರ ಒಂದೇ ದಿನ 1,497 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 27 ಜನರು ಮೃತರಾಗಿದ್ದು, 2,693 ಮಂದಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಒಟ್ಟು 60,998 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,104 ಜನರು ಸೋಂಕಿಗೆ ಬಲಿಯಾಗಿದ್ದಾರೆ. 23,603 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 36,290 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 58,624 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ರವಿವಾರ ಬಿಬಿಎಂಪಿ ಕೋವಿಡ್ ವರದಿಯಲ್ಲಿ ಒಟ್ಟು ಸಕ್ರಿಯ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ 13,726ಕ್ಕೆ ಏರಿದೆ. ಇದುವರೆಗೂ ಬೆಂಗಳೂರಿನಲ್ಲಿ 22,657 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

ಅಪ್ಪನ ಮೃತದೇಹ ಪಡೆಯಲಾಗದೆ ಕಣ್ಣೀರಿಟ್ಟ ಮಗಳು

ಅಪ್ಪನ ಮೃತದೇಹ ಪಡೆಯಲಾಗದೆ ಮಗಳು ಆಸ್ಪತ್ರೆಯಲ್ಲಿ ಕಣ್ಣೀರಿಟ್ಟ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

ಕಳೆದ ಜು.22ರಂದು 46 ವರ್ಷದ ಬೇಗೂರು ನಿವಾಸಿ ಕಿಡ್ನಿ ಸಮಸ್ಯೆ ಹಿನ್ನಲೆಯಲ್ಲಿ ಮಡಿವಾಳದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಜು.25ರಂದು ಕೊರೋನ ಪಾಸಿಟಿವ್ ಎಂದು ಆಸ್ಪತ್ರೆಯ ಸಿಬ್ಬಂದಿ ವರದಿ ನೀಡಿದ್ದಾರೆ. ಆ ನಂತರ ರೋಗಿಗೆ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೀಗಾಗಿ ಅವರನ್ನು ಐಸಿಯು ವಾರ್ಡ್ ಗೆ ದಾಖಲಿಸಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಜತೆಗೆ ಐಸಿಯುಗೆ ಶಿಫ್ಟ್ ಮಾಡಬೇಕಾದರೆ ಹಣ ಕಟ್ಟಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಬಳಿಕ ಸಂಬಂಧಿಕರು 1 ಲಕ್ಷ 30 ಸಾವಿರ ರೂ. ಬಿಲ್ ಪಾವತಿ ಮಾಡಿದ್ದಾರೆ. ಆದರೆ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು, ಬಿಲ್ ನೀಡಿ ಶವ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರಿಂದ ಕಂಗಾಲಾದ ಮೃತ ವ್ಯಕ್ತಿಯ ಪುತ್ರಿ ಹಣವಿಲ್ಲದೆ ಕಣ್ಣೀರಿಟ್ಟಿದ್ದಾರೆ. 'ಹಣ ನೀಡದೆ ಇದ್ದರೆ ನಾವೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ' ಎಂದು ಮೃತ ವ್ಯಕ್ತಿಯ ಪುತ್ರಿ ಆರೋಪಿಸಿದ್ದಾರೆ.

ಮೂರು ದಿನವಾದರೂ ಮೃತದೇಹ ನೀಡದ ಆಸ್ಪತ್ರೆ: ಆರೋಪ

ಕೊರೋನ ಸೋಂಕಿನಿಂದ ವ್ಯಕ್ತಿ ಸಾವನ್ನಪ್ಪಿ 3 ದಿನವಾದರೂ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಸಂಬಂಧಿಕರಿಗೆ ನೀಡಲಿಲ್ಲ ಎನ್ನಲಾಗಿದ್ದು, ಕುಟುಂಬಸ್ಥರು ಬಿಬಿಎಂಪಿ ಅಧಿಕಾರಿಗಳ ಮೊರೆಹೋದ ಘಟನೆ ನಡೆದಿದೆ.

ನಗರದ ಕೆ.ಪಿ ಅಗ್ರಹಾರದ 53 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ತಗಲಿತ್ತು. ಹೀಗಾಗಿ ವ್ಯಕ್ತಿಯನ್ನು ಬಿಬಿಎಂಪಿ ಆದೇಶದ ಮೇರೆಗೆ ದೇವನಹಳ್ಳಿಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಮರುದಿನವೇ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಮೂರು ದಿನವಾದರೂ ಆಸ್ಪತ್ರೆ ಸಿಬ್ಬಂದಿ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ನೀಡಿಲ್ಲ ಎಂದು ತಿಳಿದುಬಂದಿದ್ದು, ಹೀಗಾಗಿ ಕುಟುಂಬಸ್ಥರು ಬಿಬಿಎಂಪಿ ಅಧಿಕಾರಿಗಳ ಮೊರೆಹೋಗಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಮೊರೆಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ 3 ದಿನಗಳ ನಂತರ ಕುಟುಂಬಸ್ಥರಿಗೆ ಕರೆ ಮಾಡಿದ ಖಾಸಗಿ ಆಸ್ಪತ್ರೆ ಸಿಬ್ಬಂದಿ, ಒಟ್ಟಾರೆಯಾಗಿ 5 ಮೃತದೇಹಗಳಿವೆ. ಅದರಲ್ಲಿ ನಿಮ್ಮ ಸಂಬಂಧಿಕರ ಮೃತದೇಹ ಯಾವುದು ಎಂಬುದನ್ನು ಗುರುತು ಮಾಡಿ ಎನ್ನುತ್ತಿದ್ದಾರೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲ ಅಂದ್ರೆ ಮೃತದೇಹ ಕೊಡಲ್ಲ ಅನ್ನುತ್ತಿರುವ ಮಡಿವಾಳದ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ. ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ಈ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

-ಡಾ.ಸುಧಾಕರ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News