ನಗರ ತೊರೆದ ಜನತೆ: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ‘ಮನೆಗಳು ಖಾಲಿಯಿವೆ’ ಬೋರ್ಡ್ ಗಳು

Update: 2020-08-03 17:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.3: ಕೊರೋನ ಸೋಂಕಿನ ಭೀತಿಯಿಂದ ಭಯಗೊಂಡಿರುವ ಬೆಂಗಳೂರಿನ ಜನತೆ ಸಿಟಿಯನ್ನು ಖಾಲಿ ಮಾಡಿದ್ದಾರೆ. ಇದರ ಪರಿಣಾಮದಿಂದಾಗಿ ವಸತಿ ಪ್ರದೇಶಗಳಲ್ಲಿರುವ ಮನೆಗಳ ಮುಂದೆ ಮನೆಗಳು ಬಾಡಿಗೆಗೆ ಸಿಗುತ್ತವೆ ಎಂಬ ಬೋರ್ಡ್ ಗಳು ನೇತಾಡುತ್ತಿವೆ.

ಮನೆ ಮಾಲಕರು ಶೇ.10 ರಷ್ಟು ಬಾಡಿಗೆ ಹಾಗೂ ಮುಂಗಡವನ್ನು ತಗ್ಗಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 15 ಲಕ್ಷಕ್ಕೂ ಹೆಚ್ಚಿನ ಕಟ್ಟಡಗಳಿದ್ದು, ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚಿನ ವಸತಿ ಕಟ್ಟಡಗಳಿವೆ. ಅದರಲ್ಲಿ ಲಕ್ಷಕ್ಕೂ ಅಧಿಕ ಫ್ಲಾಟ್‍ ಗಳನ್ನೊಳಗೊಂಡ 10 ಸಾವಿರಕ್ಕೂ ಹೆಚ್ಚಿನ ಅಪಾರ್ಟ್ ಮೆಂಟ್‍ಗಳಿವೆ ಎಂದು ಅಂದಾಜಿಸಲಾಗಿದೆ.

ಐಶಾರಾಮಿ ಅಪಾರ್ಟ್ ಮೆಂಟ್‍ಗಳು, ವಸತಿ ಕಟ್ಟಡಗಳಲ್ಲಿನ ಶೇ.10ಕ್ಕೂ ಹೆಚ್ಚಿನ ಮನೆಗಳನ್ನು ಬಾಡಿಗೆದಾರರು ಖಾಲಿ ಮಾಡಿದ್ದಾರೆ. ನಗರದಲ್ಲಿ ಖಾಲಿ ಮಾಡಿದವರ ಪೈಕಿ ಬಹುತೇಕರು ಕೆಳ ಹಾಗೂ ಮಧ್ಯಮ ವರ್ಗದ ಜನರಾಗಿದ್ದಾರೆ. ಮೂಲದ ಪ್ರಕಾರ ಎರಡು ಲಕ್ಷಕ್ಕೂ ಹೆಚ್ಚಿನ ಕುಟುಂಬಗಳ ಪೈಕಿ ಶೇ.50 ಜನರು 1 ಬೆಡ್ ರೂಂ ಮನೆಯಲ್ಲಿದ್ದವರು. ಉಳಿದಂತೆ 2 ಹಾಗೂ 3 ಬೆಡ್ ರೂಂ ಮನೆಗಳು ಹಾಗೂ ಅಪಾರ್ಟ್ ಮೆಂಟ್‍ಗಳಲ್ಲಿನ ಫ್ಲ್ಯಾಟ್‍ಗಳಲ್ಲಿ ಬಾಡಿಗೆಗಿದ್ದವರಾಗಿದ್ದರು.

ಎಲ್ಲೆಡೆ ಫಲಕಗಳು: ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೇ ಅಂತ್ಯದಿಂದ ಜುಲೈ ಆರಂಭದವರೆಗೆ ಹೆಚ್ಚಾಗಿ ಮನೆ ಖಾಲಿಯಿದೆ ಎಂಬ ಫಲಕಗಳು ಹೆಚ್ಚಾಗಿ ಕಾಣಿಸುತ್ತಿದ್ದವು. ಅದರೀಗ ಕಳೆದ ಎಪ್ರಿಲ್‍ನಿಂದಲೇ ಅಂತಹ ಫಲಕಗಳು ಗೋಚರಿಸುತ್ತಿವೆ. ಅದರಲ್ಲೂ ಜೂನ್ ಆರಂಭದ ನಂತರ ಆ ರೀತಿ ಮನೆ ಖಾಲಿಯಿದೆ ಎಂಬ ಬೋರ್ಡ್ ಹೆಚ್ಚುವಂತಾಗಿದೆ. ಡಿಸೆಂಬರ್ ಅಂತ್ಯದವರೆಗೆ ಮನೆ ಖಾಲಿಯ ಫಲಕಗಳು ಕಾಣಿಸಲಿವೆ ಎಂದು ಅಂದಾಜಿಸಲಾಗಿದೆ.

ಬಾಡಿಗೆಯನ್ನೇ ಅವಲಂಭಿಸಿದವರಿಗೆ ಹೊಡೆತ: ನಿವೃತ್ತಿ ಜೀವನ ಸಾಗಿಸತ್ತ ಅಥವಾ ಬ್ಯಾಂಕ್ ಸಾಲ ಪಡೆದು ಮನೆ ನಿರ್ಮಿಸಿದವರು ಸಾಲ ಮರು ಪಾವತಿ ಹಾಗೂ ಜೀವನ ಸಾಗಿಸಲು ಬಾಡಿಗೆ ರೂಪದಲ್ಲಿ ಬರುವ ಆದಾಯ ಅವಲಂಭಿಸಿದ್ದಾರೆ. ಇದೀಗ ಮನೆಗಳು ಖಾಲಿ ಮಾಡುತ್ತಿರುವವರ ಸಂಖ್ಯೆ ಅಧಿಕವಾಗಿದ್ದು, ಮಾಲಕರಿಗೆ ಮಾಸಿಕ ಆದಾಯವೇ ಇಲ್ಲದಂತಾಗಿದೆ. ಜೀವನ ಸಾಗಿಸುವುದೇ ಕಷ್ಟ ಎನ್ನುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News