ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ 160 ಕೊರೋನ ಸೋಂಕಿತರಿಗೆ ಯಶಸ್ವಿ ಹೆರಿಗೆ

Update: 2020-08-03 17:43 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.3: ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಇದುವರೆಗೂ 160 ಕೊರೋನ ಸೋಂಕಿತ ಮಹಿಳೆಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಅಲ್ಲದೇ ಕೊರೋನ ಸೋಂಕಿತ ಗರ್ಭಿಣಿಯರ ಮಕ್ಕಳ ಪಾಲಿಗೆ ವಾಣಿವಿಲಾಸ ಆಸ್ಪತ್ರೆ ಆಪದ್ಬಾಂಧವನಾಗಿದ್ದು, ಇಲ್ಲಿಯವರೆಗೆ ಹೆರಿಗೆಯಾಗಿರುವ 160 ಕೊರೋನ ಸೋಂಕಿತ ಗರ್ಭಿಣಿಯರ ಯಾವೊಂದು ಮಗುವಿಗೂ ಕೊರೋನ ಸೋಂಕು ತಗುಲಿಲ್ಲ.

ವಾಣಿ ವಿಲಾಸದ ಜತೆಗೆ ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ ನಲ್ಲಿ ಕೊರೋನ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಹೆರಿಗೆಯಾದ ಕೂಡಲೇ ಆಂಬ್ಯುಲೆನ್ಸ್ ಮೂಲಕ ಮಕ್ಕಳನ್ನು ವಾಣಿವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ.

ಸ್ಥಳಾಂತರ ಮಾಡಲಾದ ಮಕ್ಕಳನ್ನು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರು ಸದಾ ಕಾಲ ಜೋಪಾನ ಮಾಡುತ್ತಾರೆ. ಜೊತೆಗೆ ಮಕ್ಕಳ ಪಾಲಿಗೆ ಕೊರೋನ ವಾರಿಯರ್ಸ್ ತಾಯಂದಿರಾಗಿ ಹಾಲಿನ ಪೌಡರ್ ಬಳಸಿ ದಿನನಿತ್ಯ ಹಾಲುಣಿಸುತ್ತಾರೆ. ಹೀಗಾಗಿ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಕೊರೋನ ಸೋಂಕಿತ ತಾಯಿಯ ವರದಿ ನೆಗೆಟಿವ್ ಆಗಿ ಗುಣಮುಖರಾದ ಕೂಡಲೆ ಮಗುವನ್ನು ತಾಯಿಯ ಜೊತೆ ಡಿಸ್ಚಾರ್ಜ್ ಮಾಡುತ್ತಿದ್ದಾರೆ.

ಕೊರೋನ ಸಂಕಷ್ಟದ ಕಾಲದಲ್ಲಿಯೂ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸುವುದು ಹಾಗೂ ಅವರ ಮಕ್ಕಳಿಗೆ ಕೊರೋನ ತಗುಲದಂತೆ ಜಾಗೃತಿ ವಹಿಸುತ್ತಿರುವ ವಾಣಿ ವಿಲಾಸ ಆಸ್ಪತ್ರೆಯ ಸಿಬ್ಬಂದಿ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News