ಹಾಸಿಗೆ ಹೊಲಿಯುವ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ನೀಡುವಂತೆ ಡಿಕೆಶಿ ಮನವಿ

Update: 2020-08-03 18:43 GMT

ಬೆಂಗಳೂರು, ಆ.3: ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಹಾಸಿಗೆ ಹೊಲಿಯುವ ಕೆಲಸ ಮಾಡುತ್ತಿದ್ದು, ಇದರಿಂದಲೆ ಅವರ ಜೀವನ ನಿರ್ವಹಣೆ ನಡೆಯುತ್ತಿದೆ. ಇವರನ್ನು ಪ್ರವರ್ಗ-1ರಲ್ಲಿ ಬರುವ ಪಿಂಜಾರ, ನದಾಫ್, ಮನ್ಸೂರಿ, ದೂದೆಖುಲಾ ಲಾದಫ್ ಹೆಸರಿನಿಂದ ಗುರುತಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಈ ಸಮುದಾಯದವರು ಕೋವಿಡ್ ಸಂಕಷ್ಟ, ಲಾಕ್‍ಡೌನ್ ಪರಿಸ್ಥಿತಿ ಹಾಗೂ ಜಾಗತಿಕ ಕಂಪೆನಿಗಳ ಭರಾಟೆಯಿಂದಾಗಿ ಉದ್ಯೋಗವಿಲ್ಲದೆ ಒಂದು ದಿನದ ಜೀವನ ನಿರ್ವಹಣೆಗೂ ಪರಿತಪಿಸುವಂತಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ ಈ ಸಮುದಾಯದವರಿಗೆ ಮಾಸಿಕ ತಲಾ 10 ಸಾವಿರ ರೂ.ಗಳಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿರುವ ಡಿ.ಕೆ.ಶಿವಕುಮಾರ್, ಈ ಸಮಾಜಗಳ ಒಕ್ಕೂಟವಾದ ಆಲ್ ಇಂಡಿಯಾ ಜಮೀಯತುಲ್ ಮನ್ಸೂರ್ ಸಂಘಟನೆಯ ಪದಾಧಿಕಾರಿಗಳನ್ನು ಕರೆದು ತಾವೇ ಖುದ್ದಾಗಿ ಅವರ ಅಹವಾಲುಗಳನ್ನು ಆಲಿಸಬೇಕೆಂದು ಒತ್ತಾಯಿಸಿದ್ದಾರೆ.

ಡಿಕೆಶಿಗೆ ಮನವಿ ಸಲ್ಲಿಕೆ: ನದಾಫ್, ಪಿಂಜಾರ, ಮನ್ಸೂರ, ದೂದೆಖುಲಾ ಸಮಾಜಗಳ ಒಕ್ಕೂಟದ ಸದಸ್ಯರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್‍ರನ್ನು ಭೇಟಿ ಮಾಡಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಮಾನ್ ಕೂಡಗಲಿ, ಪ್ರಧಾನ ಕಾರ್ಯದರ್ಶಿ ಗೌಸ್ ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News