ತಮಿಳರ ಗುಂಪಿನಿಂದ ಕನ್ನಡಿಗನ ಮೇಲೆ ಹಲ್ಲೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಂಡನೆ

Update: 2020-08-03 18:48 GMT

ಬೆಂಗಳೂರು, ಆ.3: ತಮಿಳು ಹಾಡನ್ನು ತುಂಬಾ ಜೋರಾಗಿ ಹಾಕಿಕೊಂಡಿದ್ದ ನಾಗರಭಾವಿಯ ಆಟೋ ಚಾಲಕನಿಗೆ ಕನ್ನಡದ ಹಾಡನ್ನು ಹಾಕುವಂತೆ ಮತ್ತು ಧ್ವನಿಯನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದ ಕನ್ನಡಿಗ ಸಂತೋಷ್ ಗೌಡ ಎಂಬಾತನ ಮೇಲೆ 35-40 ಮಂದಿ ತಮಿಳು ಭಾಷಿಕರು ಹಲ್ಲೆ ಮಾಡಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತೀವ್ರವಾಗಿ ಖಂಡಿಸಿದ್ದಾರೆ.

ಈ ರೀತಿಯ ಕಾರಣಕ್ಕೆ ಕನ್ನಡಿಗ ಸಂತೋಷ್ ಗೌಡನ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಇಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಬಿತ್ತರಗೊಂಡ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ವಿಶೇಷವಾಗಿ ಬೆಂಗಳೂರು ಉದ್ಯಾನನಗರಿ, ಐಟಿ ನಗರ ಎಂದೆಲ್ಲ ಚಿರಪರಿಚಿತವಾಗಿರುವ ನಗರಕ್ಕೆ ಎಲ್ಲೆಡೆಯಿಂದಲೂ ಅನ್ಯ ಭಾಷಿಗರು ಬರುತ್ತಾರೆ. ಅವರು ಬರುವುದನ್ನು ನಾವು ಬೇಡ ಎಂದು ಹೇಳುವುದೂ ಇಲ್ಲ. ಆದರೆ ಕರ್ನಾಟಕಕ್ಕೆ ಯಾರೇ ಅನ್ಯ ಭಾಷಿಗರು ಬಂದರೂ ಅತಿಥಿಗಳಾಗಿ ಬರಬೇಕೆ ವಿನಾಃ ಯಜಮಾನರಾಗಿ ಬರುವುದನ್ನು, ಕನ್ನಡಿಗರ ಮೇಲೆ ದೌರ್ಜನ್ಯ ಎಸಗುವುದನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ. ಹಾಗಾಗಿ ಭಾಷೆ ವಿಷಯದಲ್ಲಿ ಸಂತೋಷನ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳುವಂತೆ ನಾಗಾಭರಣ ಆಗ್ರಹಿಸಿದ್ದಾರೆ.

ಘಟನೆ ವಿವರ: ಬೆಂಗಳೂರಿನ ನಾಗಾರಭಾವಿ ಸಮೀಪದ ಹೋಟೆಲ್ ಮುಂಭಾಗ ಆಟೋ ಚಾಲಕನೊಬ್ಬ ನಿನ್ನೆ ತಮಿಳು ಹಾಡನ್ನು ಅತ್ಯಂತ ಜೋರಾಗಿ ಹಾಕಿದ್ದನ್ನು ಗಮನಿಸಿದ ಸಂತೋಷ್, ಕನ್ನಡದ ಹಾಡನ್ನು ಹಾಕು ಮತ್ತು ಧ್ವನಿ ಕಡಿಮೆ ಮಾಡು ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಆಟೋಚಾಲಕನು, ಸಂತೋಷ್ ಗೌಡ ಎಂಬ ಕನ್ನಡಿಗನ ಮೇಲೆ 35-40 ಮಂದಿ ಗುಂಪನ್ನು ಕರೆತಂದು ಹಲ್ಲೆ ಮಾಡಿ, ಕನ್ನಡಿಗರನ್ನು ನಿಂದಿಸಿದ್ದಾನೆ. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವವನ್ನು ನೀಡಲಾಗಿದೆ. ಈ ಬಗ್ಗೆ ಅನ್ಯ ಭಾಷಿಗರು ಅರಿಯಬೇಕಿದೆ. ಒಂದು ವೇಳೆ ಸಂತೋಷ ಗೌಡ ತಪ್ಪಾಗಿ ನಡೆದುಕೊಂಡಿದ್ದೇ ಆಗಿದ್ದರೆ ಕ್ರಮ ತೆಗೆಕೊಳ್ಳಲು ಕಾನೂನು ಇದೆ ಅದು ಬಿಟ್ಟು ಹೀಗೆ ಕನ್ನಡಿಗರ ಮೇಲೆ ಅಮಾನುಷವಾಗಿ ನಡೆದುಕೊಂಡ ಆಟೋಚಾಲಕನ ನಡೆ ಕ್ರಮವಾದುದಲ್ಲ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News