ಕೊರೋನಗಿಂತಲೂ ಭಯಾನಕ: 15 ಲಕ್ಷ ಜನರನ್ನು ಬಲಿ ಪಡೆಯುತ್ತಿದೆ ಈ ಸಾಂಕ್ರಾಮಿಕ ರೋಗ

Update: 2020-08-04 15:26 GMT

ನ್ಯೂಯಾರ್ಕ್, ಆ. 4: ಇದು ಸಣ್ಣ ಜ್ವರ ಹಾಗೂ ಅಸ್ವಸ್ಥತೆಯಿಂದ ಆರಂಭವಾಗುತ್ತದೆ. ಅನಂತರ ನೋವಿನಿಂದ ಕೂಡಿದ ಕೆಮ್ಮು ಹಾಗೂ ಉಸಿರಾಟದ ತೊಂದರೆ ಉಂಟಾಗುತ್ತದೆ. ಈ ಸೋಂಕು ಜನರ ನಡುವೆ ಹರಡುತ್ತದೆ. ಆದುದರಿಂದ ಇದನ್ನು ತಡೆಗಟ್ಟಲು ಸಂಪರ್ಕದ ಪತ್ತೆ ಹಚ್ಚುವಿಕೆ ಹಾಗೂ ರೋಗಿಗೆ ವಾರ ಅಥವಾ ತಿಂಗಳುಗಳ ಕಾಲ ಚಿಕಿತ್ಸೆಯ ಅಗತ್ಯ ಇರುತ್ತದೆ.

ಆದರೆ, ಇದು ಕೊರೋನ ಸೋಂಕು ಅಲ್ಲ. ಬದಲಾಗಿ ಕ್ಷಯರೋಗ. ಇದು ಜಗತ್ತಿನ ಅತಿ ದೊಡ್ಡ ಮಾರಣಾಂತಿಕ ಕಾಯಿಲೆ. ಈ ಕಾಯಿಲೆಗೆ ಜಗತ್ತಿನಲ್ಲಿ ಪ್ರತಿವರ್ಷ 15 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇದಲ್ಲದೆ ಎಚ್‌ಐವಿ ಹಾಗೂ ಮಲೇರಿಯ ಕೂಡ ಮಾರಣಾಂತಿಕ ರೋಗಗಳು. ಆದರೆ, ಈಗ ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನ ಸಾಂಕ್ರಾಮಿಕ ರೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಈ ಮಾರಣಾಂತಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ನಿರ್ಲಕ್ಷ ವಹಿಸಲಾಗಿದೆ.

ಕೊರೋನ ಸೋಂಕು ಕ್ಷಯರೋಗ, ಎಚ್‌ಐವಿ ಹಾಗೂ ಮಲೇರಿಯದ ಮೇಲಿನ ವಿಜ್ಞಾನದ ಗಮನವನ್ನು ಮಾತ್ರ ಬೇರೆಡೆಗೆ ಸೆಳೆದಿಲ್ಲ. ಬದಲಾಗಿ ಲಾಕ್‌ಡೌನ್ ಸಂದರ್ಭ ಮುಖ್ಯವಾಗಿ ಆಫ್ರಿಕಾ, ಏಶ್ಯಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ತಪಾಸಣೆಗೆ ಒಳಗಾಗಲು ಹಾಗೂ ಔಷಧ ಪಡೆಯಲು ದೂರ ಸಂಚರಿಸಲು ರೋಗಿಗಳಿಗೆ ಅಡ್ಡಿ ಉಂಟು ಮಾಡಿದೆ ಎಂದು ಜಗತ್ತಿನಾದ್ಯಂದತದ 24ಕ್ಕೂ ಅಧಿಕ ಸಾರ್ವಜನಿಕ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ರೋಗಿಗಳು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೋನ ಭೀತಿಯಿಂದ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಿ ಎಚ್‌ಐವಿ, ಕ್ಷಯರೋಗ ಹಾಗೂ ಮಲೇರಿಯಾ ರೋಗಿಗಳನ್ನು ದೂರ ಇರಿಸಿದ್ದಾರೆ, ಹಡಗು ಯಾನ ಹಾಗೂ ವಿಮಾನ ಹಾರಾಟದ ಮೇಲೆ ನಿರ್ಬಂಧ ಹೇರಿರುವುದರಿಂದ ಈ ರೋಗಗಳಿಂದ ತೀವ್ರ ಬಾಧಿತವಾದ ಪ್ರದೇಶಗಳಿಗೆ ಔಷಧಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

ಜಗತ್ತಿನ ಒಟ್ಟು ಕ್ಷಯ ರೋಗ ಪ್ರಕರಣಗಳಲ್ಲಿ ಶೇ. 27ರಷ್ಟು ಭಾರತದಲ್ಲಿ ಇದೆ. ಆದರೆ, ಕೊರೋನ ಸೋಂಕು ಹರಡುತ್ತಿರುವುದರಿಂದ ಕ್ಷಯ ರೋಗದ ತಪಾಸಣೆ ಶೇ. 75ಕ್ಕೆ ಇಳಿಕೆಯಾಗಿದೆ. ರಶ್ಯದಲ್ಲಿ ಎಚ್‌ಐವಿ ಕ್ಲಿನಿಕ್ ಗಳನ್ನು ಕೊರೋನ ಪರೀಕ್ಷೆಯ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.

ಒಂದು ಅಂದಾಜಿನ ಪ್ರಕಾರ ಜಗತ್ತಿನ ವಿವಿಧ ಭಾಗಗಳಲ್ಲಿ ಲಾಕ್‌ಡೌನ್ ಮುಗಿದು ಸಹಜ ಸ್ಥಿತಿಗೆ ಮರಳಿದಾಗ ಹೆಚ್ಚುವರಿ 14 ಲಕ್ಷ ಕ್ಷಯರೋಗಿಗಳು ಸಾವನ್ನಪ್ಪಬಹುದು. ಆ್ಯಂಟಿರಿಟ್ರೋವೈರಲ್ ಥೆರಪಿ ಸಿಗದೆ 5 ಲಕ್ಷ ಎಚ್‌ಐವಿ ರೋಗಿಗಳು ಸಾವನ್ನಪ್ಪಬಹುದು. ಅಲ್ಲದೆ, ಮಲೇರಿಯಾದ ಸಾವು ದ್ವಿಗುಣಗೊಂಡು 770,000 ಏರಿಕೆಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೋನ ಸೋಂಕು ಹರಡುವಿಕೆ ದಶಕಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಇದರಿಂದ ಕ್ಷಯರೋಗ, ಮಲೇರಿಯಾ ಹಾಗೂ ಎಚ್‌ಐವಿ ಚಿಕಿತ್ಸೆಯ ಪ್ರಗತಿಗೆ ಅಡ್ಡಿ ಉಂಟಾಗಲಿದೆ ಎಂದು ಹಲವು ಆರೋಗ್ಯ ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News