ಕೋವಿಡ್ ಸಂದರ್ಭದಲ್ಲಿ ಕಲಿಕೆ ನಿರಂತರತೆಗೆ ‘ವಿದ್ಯಾಗಮ' ಜಾರಿ: ಸಚಿವ ಸುರೇಶ್ ಕುಮಾರ್

Update: 2020-08-04 17:21 GMT

ಬೆಂಗಳೂರು, ಆ.4: ಕೋವಿಡ್ ಪ್ರಸರಣದ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಠಪ್ರವಚನಗಳತ್ತ ಸೆಳೆಯಲು ‘ವಿದ್ಯಾಗಮ' ನಿರಂತರ ಕಲಿಕಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಕೋವಿಡ್ ಪ್ರಸರಣದ ಈ ಸಮಯದಲ್ಲಿ ಹೆಚ್ಚು ದಿನ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಉದ್ದೇಶದಿಂದ ಎಲ್ಲ ಮಕ್ಕಳಿಗೂ ತಂತ್ರಜ್ಞಾನಾಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದು ‘ವಿದ್ಯಾಗಮ’ ಯೋಜನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಸಮುದಾಯದಲ್ಲಿ ವಿವಿಧ ಸ್ತರದ ಮಕ್ಕಳಿದ್ದಾರೆ. ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ, ಅರಣ್ಯದಂಚಿನ ಗ್ರಾಮಗಳ ಮಕ್ಕಳಿದ್ದಾರೆ. ಕೆಲವರ ಮನೆಯಲ್ಲಿ ದೂರದರ್ಶನಗಳಿದ್ದರೆ, ಕೆಲವರ ಮನೆಗಳಲ್ಲಿ ಫೋನ್ ಸೆಟ್‍ಗಳಿವೆ. ಫೋನ್ ಇದ್ದರೆ ನೆಟ್ ಸಂಪರ್ಕ ಇರುವುದಿಲ್ಲ. ಟಿವಿಗಳಿದ್ದರೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಹಲವಾರು ಮಕ್ಕಳಿಗೆ ಇದಾವುದರ ಸೌಲಭ್ಯವೂ ಇರುವುದಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಕೋವಿಡ್ ಪ್ರಸರಣದ ಇಂತಹ ಕಾಲಘಟ್ಟದಲ್ಲಿಯೂ ಎಲ್ಲ ಸ್ತರದ ಮಕ್ಕಳ ಕಲಿಕೆಯು ನಿರಂತರವಾಗಿರುವಂತೆ ವಿದ್ಯಾಗಮ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವೈಜ್ಞಾನಿಕವಾಗಿ ರೂಪುಗೊಳಿಸಲಾಗಿರುವ ಈ ಉಪಕ್ರಮವು ಇಡೀ ರಾಷ್ಟ್ರದಲ್ಲಿ ವಿಶಿಷ್ಟ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾಗಮ ಯೋಜನೆ ಅನುಷ್ಠಾನದ ಹಿನ್ನೆಲೆಯನ್ನು ವಿವರಿಸಿರುವ ಸುರೇಶ್ ಕುಮಾರ್, ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದೇ ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಎಂ.ಕೆ.ಶ್ರೀಧರ್ ನೇತೃತ್ವದ ಸಮಿತಿ ವರದಿ ಸಲ್ಲಿಸಿತ್ತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ತಂತ್ರಜ್ಞಾನವನ್ನು ಮತ್ತು ಶಿಕ್ಷಕ ಸಮುದಾಯವನ್ನು ಯಾವ ರೀತಿ ಬಳಸಿಕೊಳ್ಳಬಹುದೆಂಬ, ಏನೇನು ಮಾಡಬಹುದೆಂದು ವರದಿಯ ಹಿನ್ನೆಲೆಯಲ್ಲಿ ಮುದ್ರಣ ಮಾಧ್ಯಮದ ಹಿರಿಯ ಸಂಪಾದಕರುು, ರಾಜ್ಯದ ಹಿಂದಿನ ಶಿಕ್ಷಣ ಸಚಿವರು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸದಸ್ಯರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆಯಲಾಗಿದ್ದು, ಈ ಎಲ್ಲ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ‘ವಿದ್ಯಾಗಮ' ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಯ ಅನುಷ್ಠಾನದಿಂದ ಮಕ್ಕಳು ಸುರಕ್ಷಿತವಾಗಿ ಕಲಿಕೆಯನ್ನು ತೊಡಗಿಸಿಕೊಳ್ಳಲಿದ್ದಾರೆ. ಪ್ರತಿಯೊಬ್ಬ ಶಿಕ್ಷಕರು ಸ್ವಯಂ ಪ್ರೇರಿತರಾಗಿ ಮಾರ್ಗದರ್ಶಕರಾಗಿ ರೂಪಾಂತರಗೊಂಡು ಸ್ಥಳೀಯ ಅವಶ್ಯಕತೆಗನುಗುಣವಾಗಿ ನಾವಿನ್ಯ ಯೋಜನೆಗಳನ್ನು ರೂಪಿಸಿಕೊಂಡು ಪ್ರತಿ ಮಗುವಿನ ಮುಂದಿನ ಭವಿಷ್ಯದ ರೂವಾರಿಗಳಾಗಿ ಜವಾಬ್ದಾರಿ ನಿಭಾಯಿಸುವುದು ಮತ್ತು ಮಕ್ಕಳ ಈ ಸಂದರ್ಭದ ಅಭದ್ರತೆಯ ಭಾವವನ್ನು ಹೋಗಲಾಡಿಸುವುದು 'ವಿದ್ಯಾಗಮ' ಆಶಯವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿದ್ಯಾಗಮ ಯೋಜನೆಯ ರೂಪುರೇಷೆಗಳು: ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಯೋಜನೆ, ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮನೆಗಳಿಗೆ ಮಧ್ಯಾಹ್ನದ ಉಪಹಾರ ಸಾಮಗ್ರಿ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ.

ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಮತ್ತು ವಲಸೆ ಮಕ್ಕಳ ಅವಶ್ಯಕತೆಗಳಿಗೆ ವಿಶೇಷ ಆದ್ಯತೆ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲ ಭಾಗೀದಾರ ಸಕ್ರಿಯ ತೊಡಗಿಸುವಿಕೆ.

‘ವಿದ್ಯಾಗಮ' ಮುಖ್ಯಾಂಶಗಳು: ಪ್ರತಿ ಶಾಲೆಯು 20 ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ತರಗತಿಗಳು ರೂಪಿತವಾಗುತ್ತವೆ, ತರಗತಿ ವಿಧ 1-ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದ(ಮೊಬೈಲ್ ರಹಿತ) ಮಕ್ಕಳ ತರಗತಿ, ತರಗತಿ ವಿಧ 2- ಇಂಟರ್ನೆಟ್ ರಹಿತ ಮೊಬೈಲ್ ಫೋನ್ ಹೊಂದಿರುವ ತರಗತಿ, ತರಗತಿ ವಿಧ 3-ಇಂಟರ್ನೆಟ್ ಸಹಿತ ಕಂಪ್ಯೂಟರ್/ಟ್ಯಾಬ್/ಸ್ಮಾರ್ಟ್ ಫೋನ್ ಹೊಂದಿರುವ ತರಗತಿ.

1 ರಿಂದ 5ನೇ ತರಗತಿ, 6 ರಿಂದ 8ನೇ ತರಗತಿ ಹಾಗೂ 8 ರಿಂದ 10ನೇ ತರಗತಿ ಮಕ್ಕಳನ್ನು ವಾಸ ಸ್ಥಳದ ಭೌಗೋಳಿಕ ಪ್ರದೇಶವನ್ನು ಆಧರಿಸಿ ಹಂಚಿಕೆಯನ್ನು ಮಾಡಲಾಗುತ್ತದೆ. ಮೂರೂ ತರಗತಿಯ ಮಾರ್ಗದರ್ಶಿ ಶಿಕ್ಷಕರು 'ನೆರೆಹೊರೆ' ಗುಂಪುವಾರು ಮಕ್ಕಳನ್ನು ವಾರಕ್ಕೆ ಸಾಧ್ಯವಾದಷ್ಟು ಬಾರಿ ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಭೇಟಿ ಮಾಡಿ ಮಕ್ಕಳ ಕಲಿಕಾ ಪ್ರಗತಿ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಾರೆ.

ಪೂರೈಸಿರುವ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಸ್ವಕಲಿಕೆಯನ್ನು ಮುಂದುವರೆಸಲು ಮಕ್ಕಳಿಗೆ ಮತ್ತು ಪೋಷಕರಿಗೆ ವಿವರವಾದ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹರುಡುವಿಕೆಯನ್ನು ತಡೆಗಟ್ಟಲು ತೆಗೆದುಕೊಳ್ಳ ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬೋಧನೆ ಕೈಗೊಳ್ಳಲಾಗುತ್ತದೆ.

ಸ್ವಯಂ ಸೇವಕರು/ಸರಕಾರೇತರ ಸಂಸ್ಥೆಗಳು- ಪ್ರತಿಯೊಂದು ನೆರೆಹೊರೆ ಗುಂಪಿಗೆ ಆ ಪ್ರದೇಶದಲ್ಲಿ ನಿವಾಸಿಯಾಗಿರುವ ವಿದ್ಯಾವಂತ ಯುವಕ/ಯುವತಿಯರನ್ನು ಗುರುತಿಸಿ ಸ್ವಯಂಸೇವಕರನ್ನಾಗಿ ನೇಮಿಸಿ ಆ ಸ್ವಯಂಸೇವಕರು ಮಾರ್ಗದರ್ಶಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನೆರೆಹೊರೆ ಗುಂಪಿನ ಮಕ್ಕಳಿಗೆ ಪಾಠ ಪ್ರವಚನ ಕೈಗೊಳ್ಳಲಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಕಾರವನ್ನೂ ಪಡೆಯಲಾಗುತ್ತದೆ.

ಲಭ್ಯತೆಯ ಆಧಾರದಲ್ಲಿ ಮಾರ್ಗದರ್ಶಿ ಶಿಕ್ಷಕರು ಝೂಮ್/ಸಿಸ್ಕೋ ವೆಬೆಕ್ಸ್/ ಗೂಗಲ್ ಕ್ಲಾಸ್ ರೂಮ್ ಮುಂತಾದ ಇಂಟರ್ನೆಟ್ ಅಪ್ಲಿಕೇಷನ್ (ಆ್ಯಪ್)ಗಳನ್ನು ಬಳಸಿ ವಿಡಿಯೋ ಕಾನ್ಫರೆನ್ಸ್ ಬೋಧನೆ ಮಾಡುತ್ತಾರೆ. ಮೂರೂ ತರಗತಿಗೆ ಮಾರ್ಗದರ್ಶಿ ಶಿಕ್ಷಕರು ಕೇವಲ ತಂತ್ರಜ್ಞಾನಾಧಾರಿತ ಸಾಧನಗಳ ಮೇಲೆ ಅಥವಾ ಶಿಕ್ಷಕರ ಮೇಲೆ ಮಕ್ಕಳು ಅವಲಂಬಿತರಾಗದೆ ಸ್ವಯಂ ಕಲಿಕೆಗೆ ಪೂರಕವಾಗುವಂತಹ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಮಾರ್ಗದರ್ಶಿ ಶಿಕ್ಷಕರು ತಮಗೆ ಹಂಚಿಕೆ ಮಾಡಿರುವ ಕಾಲ್ಪನಿಕ ಕಲಿಕಾ ತರಗತಿಯ ವ್ಯಾಪ್ತಿಯಲ್ಲಿ ಯಾವುದಾದರೂ ಮಗು ವಲಸೆ ಬಂದಿದ್ದಲ್ಲಿ ಯಾವುದೇ ದಾಖಲಾತಿಗಳನ್ನು ನಿರೀಕ್ಷಿಸದೆ ಕೇವಲ ಪೋಷಕರ ಹೇಳಿಕೆ ಮೇರೆಗೆ ಮಗುವನ್ನು ಸೂಕ್ತ ತರಗತಿಗೆ ದಾಖಲಾತಿ ಮಾಡಿಕೊಳ್ಳುತ್ತಾರೆ.

ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಮೇಲೆ ತಿಳಿಸಿರುವ ಎಲ್ಲಾ ಸೌಲಭ್ಯಗಳೊಂದಿಗೆ ಕೆಳಗಿನ ಹೆಚ್ಚುವರಿ ಸೌಲಭ್ಯಗಳನ್ನು ಮಾರ್ಗದರ್ಶಿ ಶಿಕ್ಷಕರು ಬಿ.ಐ.ಇ.ಆರ್.ಟಿ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ದೊರಕುವಂತೆ ಕ್ರಮವಹಿಸುವರು.

ಸಮೀಕ್ಷೆಯ ಫಲಿತಾಂಶದಂತೆ ಸುಮಾರು ಶೇ.90ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಮನೆಗಳಲ್ಲಿ ಟಿ.ವಿ ಲಭ್ಯವಿರುವುದರಿಂದ, 'ಸಂವೇದ'-ಟಿ.ವಿ ಆಧಾರಿತ ಕಲಿಕಾ ಕಾರ್ಯಕ್ರಮವನ್ನು 'ವಿದ್ಯಾಗಮ' ಕಾರ್ಯಕ್ರಮದ ಅಂಗವಾಗಿ ರೂಪಿಸಲಾಗಿದೆ. ಈ ಉಪಕ್ರಮವು ಮಾರ್ಗದರ್ಶಿ ಶಿಕ್ಷಕರ ಕಾರ್ಯಕ್ಕೆ ಪೂರಕವಾಗಿರುತ್ತದೆಯೇ ಹೊರತು ಪರ್ಯಾಯವಾಗಿರುವುದಿಲ್ಲ.

ಯು-ಟ್ಯೂಬ್ ತರಗತಿಗಳು 1 ರಿಂದ 10ನೇ ತರಗತಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಪಾಠಗಳನ್ನು ಪರಿಣಿತ ಶಿಕ್ಷಕರ ಬೋಧನೆಯ ವಿಡಿಯೋ ತಯಾರಿಸಿ ಯು-ಟ್ಯೂಬ್ ಚಾನಲ್ 'ಮಕ್ಕಳ ವಾಣಿ' ಯಲ್ಲೂ ಅಪ್ಲೋಡ್ ಮಾಡಲಾಗುವುದು.

ನಿರಂತರ ವ್ಯಾಪಕ ಮೌಲ್ಯಮಾಪನ: ಕೋವಿಡ್ ಹಿನ್ನಲೆಯಲ್ಲಿ ಗಣನೀಯ ಅವಧಿಗೆ ಭೌತಿಕ ಶಾಲೆಗಳನ್ನು ನಡೆಸಲು ಸಾಧ್ಯವಾಗದೆ ಇದ್ದಲ್ಲಿ ಪ್ರಸ್ತುತ ಸಾಲಿಗೆ ಸಂಕಲನಾತ್ಮಕ ಮೌಲ್ಯಮಾಪನವನ್ನು ಕೈಬಿಡಲಾಗುತ್ತದೆ. ರೂಪಣಾತ್ಮಕ ಮೌಲ್ಯಮಾಪನ 1,2, 3 ಮತ್ತು 4ನ್ನು ಭೌತಿಕವಾಗಿ ಶಾಲೆಗಳನ್ನು ನಡೆಸಲು ಸಾಧ್ಯವಾಗದೆ ಇದ್ದಲ್ಲಿಯೂ ಸಹ ಮಾರ್ಗದರ್ಶಿ ಶಿಕ್ಷಕರ ಹಂತದಲ್ಲಿ ತಪ್ಪದೆ ಕೈಗೊಳ್ಳಲಾಗುತ್ತದೆ.

ಮಾರ್ಗದರ್ಶಿ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇಲಾಖೆಯ ವಿವಿಧ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News