ರಾಮ ಮಂದಿರ ನಿರ್ಮಾಣ ಇತಿಹಾಸದ ಪುನರಾವರ್ತನೆಯನ್ನು ನೆನಪಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

Update: 2020-08-05 15:16 GMT

ಅಯೋಧ್ಯೆ,ಆ.5: ಇದು ಭಾರತದ ಪಾಲಿಗೆ ಭಾವನಾತ್ಮಕ ಘಳಿಗೆಯಾಗಿದೆ. ಸುದೀರ್ಘ ಕಾಯುವಿಕೆ ಇಂದು ಕೊನೆಗೊಂಡಿದೆ. ಹಲವಾರು ವರ್ಷಗಳ ಕಾಲ ಟೆಂಟ್‌ನಡಿ ಇದ್ದ ಶ್ರೀರಾಮನಿಗಾಗಿ ಈಗ ಭವ್ಯ ಮಂದಿರವೊಂದು ನಿರ್ಮಾಣಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆಯಲ್ಲಿ ಪಾಲ್ಗೊಂಡ ಬಳಿಕ ಶುಭಮುಹೂರ್ತದಲ್ಲಿ ರಾಮ ಲಲ್ಲಾನ ಗರ್ಭಗುಡಿಯಯಲ್ಲಿ 40 ಕೆ.ಜಿ.ತೂಕದ ಬೆಳ್ಳಿ ಇಟ್ಟಿಗೆಯನ್ನಿರಿಸಿ ಸಾಂಕೇತಿಕ ಶಿಲಾನ್ಯಾಸವನ್ನು ನೆರವೇರಿಸಿದ ಬಳಿಕ ನಿರಂತರವಾಗಿ ಮೊಳಗುತ್ತಿದ್ದ ‘ಭಾರತ ಮಾತಾ ಕೀ ಜೈ’ ಮತ್ತು ‘ಹರ ಹರ ಮಹಾದೇವ’ಘೋಷಣೆಗಳ ನಡುವೆ ದೇಶಾದ್ಯಂತದ ಭಕ್ತಸ್ತೋಮಕ್ಕೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಭಾಷಣವನ್ನು ಆರಂಭಿಸಿದರು ಮೋದಿ,

“ರಾಮ ಜನ್ಮಭೂಮಿ ಟ್ರಸ್ಟ್ ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗುವ ಅವಕಾಶವನ್ನು ನೀಡಿದ್ದು ನನ್ನ ಅದೃಷ್ಟವಾಗಿದೆ. ಶ್ರೀರಾಮನು ಪ್ರತಿಯೊಬ್ಬರಿಗೂ ಸೇರಿದವನಾಗಿದ್ದಾನೆ. ಶ್ರೀರಾಮ ಪ್ರತಿಯೊಬ್ಬರಲ್ಲಿಯೂ ಇದ್ದಾನೆ. ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರು,ಆದಿವಾಸಿಗಳು ಮತ್ತು ಸಮಾಜದ ಎಲ್ಲ ಸದಸ್ಯರು ಮಹಾತ್ಮಾ ಗಾಂಧಿಯವರಿಗೆ ನೆರವಾಗಿದ್ದ ರೀತಿಯಲ್ಲಿಯೇ ದೇಶಾದ್ಯಂತ ಜನರ ಬೆಂಬಲದಿಂದಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭಗೊಂಡಿದೆ. ನಾವೆಲ್ಲರೂ ಮುನ್ನಡೆಯುತ್ತೇವೆ ಮತ್ತು ದೇಶವು ಮುನ್ನಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಈ ರಾಮ ಮಂದಿರವು ಶತಮಾನಗಳವರೆಗೆ ಪೀಳಿಗೆಗಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ನೀಡಲಿದೆ” ಎಂದು ಹೇಳಿದರು.

‘ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆಯೇ ಹಲವಾರು ಮಿತಿಗಳ ನಡುವೆ ಈ ಸಮಾರಂಭವು ನಡೆಯುತ್ತಿದೆ. ಶ್ರೀ ರಾಮ ತನ್ನ ಮಿತಿಗಳಿಗೆ ಅಂಟಿಕೊಂಡಂತೆ ನಾವೂ ಅಂತಹುದೇ ನಿದರ್ಶನವನ್ನು ಪಾಲಿಸುತ್ತಿದ್ದೇವೆ. ಪ್ರತಿರೋಧವನ್ನು ಮೀರಿ ಮುನ್ನಡೆಯುವುದು ಹೇಗೆ ಎನ್ನುವುದನ್ನು ಮತ್ತು ಜ್ಞಾನ ಹಾಗೂ ಸಂಶೋಧನೆಯ ಪಥದಲ್ಲಿ ಸಾಗುವುದನ್ನು ಶ್ರೀರಾಮ ನಮಗೆ ಕಲಿಸಿದ್ದಾನೆ. ಭಾತೃತ್ವದ ಭಾವನೆಯೊಂದಿಗೆ ಈ ಮಂದಿರವನ್ನು ನಾವು ನಿರ್ಮಿಸಬೇಕಿದೆ ’ಎಂದ ಮೋದಿ, ಶ್ರೀರಾಮ ಪರಿಸ್ಥಿತಿ ಮತ್ತು ಸ್ಥಳಕ್ಕೆ ಅನುಗುಣವಾಗಿ ನಿಖರ ನಿಲುವನ್ನು ತಳೆಯುತ್ತಿದ್ದ. ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಮೃದ್ಧಿ ಹೊಂದುವುದನ್ನು ಆತ ನಮಗೆ ಕಲಿಸಿದ್ದಾನೆ. ಆತನ ಆದರ್ಶಗಳು ನಮಗೆ ಮುನ್ನಡೆಯಲು ಸ್ಫೂರ್ತಿಯನ್ನು ನೀಡುತ್ತಿವೆ ’ ಎಂದರು.

ಶ್ರೀರಾಮನ ಸಂದೇಶ, ರಾಮ ಮಂದಿರದ ಸಂದೇಶ, ಶತಮಾನಗಷ್ಟು ಹಳೆಯದಾದ ನಮ್ಮ ಪರಂಪರೆಯ ಸಂದೇಶ ವಿಶ್ವವನ್ನು ತಲುಪುವಂತೆ ನಾವು ನೋಡಿಕೊಳ್ಳಬೇಕಾಗಿದೆ. ವಿಶ್ವವು ನಮ್ಮ ಮುನ್ನೋಟವನ್ನು ಹೇಗೆ ತಿಳಿದುಕೊಳ್ಳುತ್ತದೆ ಎನ್ನುವುದು ನಮ್ಮ ಮತ್ತು ನಮ್ಮ ಭವಿಷ್ಯದ ಪೀಳಿಗೆಗಳ ಹೊಣೆಗಾರಿಕೆಯಾಗಿದೆ ’ಎಂದ ಅವರು, ರಾಮ ಮಂದಿರ ನಿರ್ಮಾಣವು ಇತಿಹಾಸವು ಪುನರಾವರ್ತಿಸುತ್ತದೆ ಎನ್ನುವುದನ್ನು ನೆನಪಿಸುತ್ತಿದೆ. ಇಂದಿನ ದಿನವು ಕೋಟ್ಯಂತರ ಭಕ್ತರ ಸಂಕಲ್ಪಗಳ ಈಡೇರಿಕೆಗೆ ಸಾಕ್ಷಿಯಾಗಿದೆ. ಇಂದಿನ ದಿನವು ನ್ಯಾಯವನ್ನು ಪ್ರೀತಿಸುವ ಭಾರತಕ್ಕೆ ಸತ್ಯ, ಅಹಿಂಸೆ, ಶ್ರದ್ಧೆ ಮತ್ತು ತ್ಯಾಗದ ಅದ್ವಿತೀಯ ಕಾಣಿಕೆಯಾಗಿದೆ ಎಂದರು.

ಮಂದಿರ ನಿರ್ಮಾಣವು ಅಯೋಧ್ಯೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಅದು ಪ್ರದೇಶದ ಚಹರೆಯನ್ನೇ ಬದಲಿಸಲಿದೆ ಮತ್ತು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ. ಶ್ರೀರಾಮ ಮತ್ತು ಜಾನಕಿ ಮಾತೆಯ ದರ್ಶನಕ್ಕಾಗಿ ವಿಶ್ವಾದ್ಯಂತದಿಂದ ಜನರು ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಶಿಲಾನ್ಯಾಸ ಫಲಕವನ್ನು ಅನಾವರಣಗೊಳಿಸಿದ ಪ್ರಧಾನಿ,ಸಮಾರಂಭದ ಸ್ಮಾರಕ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದರು.

ಹನುಮನ ದರ್ಶನ

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಆಗಮಿಸಿದ ಬಳಿಕ ಮೊದಲು ರಾಮನ ಬಂಟ ಹನುಮಂತನ ಹನುಮಾನಗಡಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆಗಳನ್ನು ಸಲ್ಲಿಸಿದರು. ಮುಖ್ಯವಾದ ಭೂಮಿ ಪೂಜೆ ಸಮಾರಂಭಕ್ಕೆ ತೆರಳುವ ಮುನ್ನ ಅವರು ರಾಮ ಲಲ್ಲಾನ ತಾತ್ಕಾಲಿಕ ಮಂದಿರಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ,ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ ಮತ್ತು ಸುಮಾರು 170 ಆಧ್ಯಾತ್ಮಿಕ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಂದಿರ-ಮಸೀದಿ ವಿವಾದದಲ್ಲಿ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರು ಸಮಾರಂಭಕ್ಕೆ ಮೊದಲ ಆಹ್ವಾನಿತ ಗಣ್ಯರಾಗಿದ್ದರು.

1990ರ ದಶಕದಲ್ಲಿ ರಾಮ ಮಂದಿರ ಆಂದೋಲನವನ್ನು ಮುನ್ನಡೆಸಿದ್ದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಮತ್ತು ಇನ್ನೋರ್ವ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಕೊರೋನ ವೈರಸ್ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಸಮಾರಂಭವನ್ನು ವೀಕ್ಷಿಸಿದರು. ಮಂದಿರ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರ ಆಂದೋಲನದ ಮುಖಗಳಾಗಿದ್ದ ಈ ಇಬ್ಬರು ಹಿರಿಯ ನಾಯಕರಿಗೆ ಕೊನೆಯ ಗಳಿಗೆಯಲ್ಲಿ ಆಹ್ವಾನ ಪತ್ರಗಳನ್ನು ಕಳುಹಿಸಿತ್ತು ಎನ್ನಲಾಗಿದೆ.

ಕೊರೋನ ವೈರಸ್ ಮುನ್ನೆಚ್ಚರಿಕೆಯಿಂದ ಸಮಾರಂಭದಿಂದ ದೂರವಿರುವುದಾಗಿ ಈ ಮೊದಲು ಹೇಳಿದ್ದ ಇನ್ನೋರ್ವ ಪ್ರಮುಖ ಬಿಜೆಪಿ ನಾಯಕಿ ಉಮಾ ಭಾರತಿ ಅವರು ಬುಧವಾರ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿಯನ್ನು ಚುನಾವಣಾ ಶಕ್ತಿಯನ್ನಾಗಿಸಿದ್ದ ಮಂದಿರ ಅಭಿಯಾನ

ಮೂರು ದಶಕಗಳ ಹಿಂದೆ ರಾಷ್ಟ್ರ ರಾಜಕೀಯದಲ್ಲಿ ಇದ್ದೂ ಇಲ್ಲದಂತಿದ್ದ ಬಿಜೆಪಿಯನ್ನು ರಾಷ್ಟ್ರೀಯ ಚುನಾವಣಾ ಶಕ್ತಿಯನ್ನಾಗಿ ಹೊರಹೊಮ್ಮಿಸುವಲ್ಲಿ ರಾಮ ಮಂದಿರ ಆಂದೋಲನವು ಪ್ರಮುಖ ಪಾತ್ರವನ್ನು ವಹಿಸಿತ್ತು. 1990ರ ದಶಕದಲ್ಲಿ ಎಲ್.ಕೆ.ಆಡ್ವಾಣಿಯವರು 16ನೇ ಶತಮಾನದ ಬಾಬ್ರಿ ಮಸೀದಿಯಿದ್ದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವನ್ನು ಒತ್ತಾಯಿಸಲು ರಥಯಾತ್ರೆಯನ್ನು ಕೈಗೊಂಡಿದ್ದರು. 1992,ಡಿಸೆಂಬರ್ 6ರಂದು ಶ್ರೀರಾಮನ ಜನ್ಮಸ್ಥಳವನ್ನು ಪ್ರತಿನಿಧಿಸುತ್ತಿದ್ದ ಪ್ರಾಚೀನ ಮಂದಿರದ ಅವಶೇಷಗಳ ಮೇಲೆ ಮಸೀದಿಯು ನಿರ್ಮಾಣಗೊಂಡಿದೆ ಎಂದು ಸಂಘಪರಿವಾರ ಕಾರ್ಯಕರ್ತರು ಅದನ್ನು ಧ್ವಂಸಗೊಳಿಸಿದ್ದರು. ನಂತರ ದೇಶಾದ್ಯಂತ ನಡೆದ ಕೋಮು ಗಲಭೆಗಳಲ್ಲಿ 2,000ಕ್ಕೂ ಅಧಿಕ ಜೀವಗಳು ಬಲಿಯಾಗಿದ್ದವು.

ಸಂಧಾನದ ಹಲವಾರು ಪ್ರಯತ್ನಗಳು ವಿಫಲಗೊಂಡ ಬಳಿಕ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಹಿಂದುಗಳು ಮತ್ತು ಮುಸ್ಲಿಮರು ಹಕ್ಕು ಮಂಡಿಸಿದ್ದ 2.77 ಎಕರೆ ವಿಸ್ತೀರ್ಣದ ನಿವೇಶನವನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡುವ ಮೂಲಕ ಚಾರಿತ್ರಿಕ ತೀರ್ಪನ್ನು ಪ್ರಕಟಿಸಿತ್ತು. ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಐದು ಎಕರೆ ಪ್ರತ್ಯೇಕ ನಿವೇಶನವನ್ನು ನೀಡುವಂತೆ ನ್ಯಾಯಾಲಯವು ಆದೇಶಿಸಿತ್ತು.

ನಾಗರ ಶೈಲಿ

ಅಯೋಧ್ಯೆಯಲ್ಲಿ ತಲೆಯೆತ್ತಲಿರುವ ರಾಮ ಮಂದಿರವನ್ನು ನಾಗರ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು,161 ಅಡಿ ಎತ್ತರದ ಮೂರು ಅಂತಸ್ತುಗಳ ಕಲ್ಲಿನ ಕಟ್ಟಡವು ಹಲವಾರು ಬುರುಜುಗಳು,ಸ್ತಂಭಗಳು ಮತ್ತು ಗುಮ್ಮಟಗಳನ್ನು ಹೊಂದಿರಲಿದೆ.

29 ವರ್ಷಗಳಲ್ಲಿ ಅಯೋಧ್ಯೆಗೆ ಮೋದಿ ಮೊದಲ ಭೇಟಿ

ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು 29 ವರ್ಷಗಳ ಬಳಿಕ ಅಯೋಧ್ಯೆಗೆ ಮರಳಿ ಭೇಟಿ ನೀಡಿದ್ದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಲು ಆಗಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ ಜೋಶಿ ಅವರು ಕೈಗೊಂಡಿದ್ದ ‘ತಿರಂಗಾ ಯಾತ್ರಾ’ ಅಭಿಯಾನದ ಸಂಚಾಲಕರಾಗಿ ಮೋದಿ ಅವರು ಹಿಂದಿನ ಬಾರಿ 1992ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಇಂದು ವಿಧಿ 370 ರದ್ದುಗೊಂಡು ಒಂದು ವರ್ಷ ಪೂರ್ಣಗೊಂಡಿದೆ.

ರಾಮ ಮಂದಿರ ನಿರ್ಮಾಣಗೊಂಡಾಗ ಮಾತ್ರ ತಾನು ಅಯೋಧ್ಯೆಗೆ ಮರಳುವುದಾಗಿ ಅಂದು ಮೋದಿ ಪಣ ತೊಟ್ಟಿದ್ದರು.

ಮೋದಿ ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಲು ಫೈಝಾಬಾದ್‌ನ ಗಡಿಯಲ್ಲಿರುವ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ್ದರಾದರೂ ಅಯೋಧ್ಯೆಗೆ ಕಾಲಿರಿಸಿರಲಿಲ್ಲ.

  ಅಯೋಧ್ಯೆಗೆ ಪೊಲೀಸರ ಸರ್ಪಗಾವಲು

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಧಾನಿಯವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಎಲ್ಲ 300 ಪೊಲೀಸ್ ಸಿಬ್ಬಂದಿಗಳು ಕೋವಿಡ್-19ಗೆ ನೆಗೆಟಿವ್ ಆಗಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತು.

ಅಯೋಧ್ಯೆಯನ್ನು ಸೇರುವ ಎಲ್ಲ ಮಾರ್ಗಗಳನ್ನು ಸೀಲ್ ಮಾಡಲಾಗಿತ್ತು. ಬಿಡಾಡಿ ಪ್ರಾಣಿಗಳನ್ನು ನಿಯಂತ್ರಿಸಲು ನಗರಾಡಳಿತವು ತನ್ನ 500 ಸಿಬ್ಬಂದಿಗಳನ್ನು ನೇಮಿಸಿತ್ತು.

ಮಂದಿರ ನಿವೇಶನವು ನಗರದ ಜನನಿಬಿಡ ಪ್ರದೇಶದ ನಡುವೆ ಇರುವುದರಿಂದ ಎಲ್ಲ ಮನೆಗಳು ಮತ್ತು ಸಮೀಪದ ದೇವಸ್ಥಾನಗಳ ಛಾವಣಿಗಳ ಮೇಲೆ ಎಸ್‌ಪಿಜಿ ಕಮಾಂಡೋಗಳು ಮತ್ತು ಶಾರ್ಪಶೂಟರ್‌ಗಳು ಹದ್ದಿನ ಕಣ್ಣುಗಳಿಂದ ಕಾಯುತ್ತಿದ್ದರು.

ಫೈಝಾಬಾದ ಜಿಲ್ಲೆಯ ಗಡಿಗಳ ಜೊತೆಗೆ ಅಯೋಧ್ಯೆಯ ನರೆಯ ಜಿಲ್ಲೆಗಳ ನೇಪಾಳಕ್ಕೆ ಹೊಂದಿಕೊಂಡಿರುವ ಗಡಿಗಳನ್ನೂ ಸೀಲ್ ಮಾಡಲಾಗಿತ್ತು. ಈ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ಅಯೋಧ್ಯೆಗೆ ತೆರಳುವ ಎಲ್ಲ ಮಾರ್ಗಗಳಲ್ಲಿ ಸುಮಾರು 100 ತನಿಖಾ ಠಾಣೆಗಳನ್ನು ಸ್ಥಾಪಿಸಲಾಗಿತ್ತು. ಜಿಲ್ಲೆಯನ್ನು ‘ಹಾರಾಟ ನಿಷೇಧ ವಲಯ’ಎಂದು ಘೋಷಿಸಲಾಗಿದ್ದು,ಸರಯೂ ನದಿಯ ದಂಡೆಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News