ಕೋವಿಡ್: ದೇಶದಲ್ಲಿ ಒಂದೇ ದಿನ ಅತ್ಯಧಿಕ 918 ಸೋಂಕಿತರು ಬಲಿ

Update: 2020-08-06 03:58 GMT

ಹೊಸದಿಲ್ಲಿ, ಆ.6: ದೇಶದಲ್ಲಿ ಕೋವಿಡ್-19 ಮರಣ ಮೃದಂಗ ಮುಂದುವರಿದಿದ್ದು, ಬುಧವಾರ ಒಂದೇ ದಿನ ದಾಖಲೆ 918 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 40 ಸಾವಿರದ ಗಡಿ ದಾಟಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ಸಾವಿನ ಸಂಖ್ಯೆ 900ಕ್ಕಿಂತ ಅಧಿಕವಾಗಿದ್ದು, ಭಾರತ ಗರಿಷ್ಠ ಕೋವಿಡ್ ಸಾವು ಸಂಭವಿಸಿದ ದೇಶಗಳ ಪೈಕಿ ಐದನೇ ಸ್ಥಾನಕ್ಕೇರಿದೆ.

ಕಳೆದ ಎರಡು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ ಅಲ್ಪ ಇಳಿಕೆ ಕಂಡಿದ್ದರೂ ಬುಧವಾರ ಮತ್ತೆ 56,695 ಪ್ರಕರಣಗಳು ಸೇರ್ಪಡೆಯಾಗಿವೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 19,61,357ಕ್ಕೇರಿದೆ.

ಭಾರತದಲ್ಲಿ ಒಟ್ಟು ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದ್ದರೂ, ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ 30 ದಿನಗಳಲ್ಲಿ ದೇಶದಲ್ಲಿ 20 ಸಾವಿರಕ್ಕೂ ಅಧಿಕ ಸೋಂಕಿತರ ಮೃತಪಟ್ಟಿದ್ದಾರೆ. ಕಳೆದ 13 ದಿನಗಳಲ್ಲಿ 10 ಸಾವಿರ ಹಾಗೂ ಆರು ದಿನಗಳಲ್ಲಿ ಐದು ಸಾವಿರ ಮಂದಿ ಕೊನೆಯುಸಿರೆಳೆದಿದ್ದಾರೆ.

ಆಗಸ್ಟ್ 1ರಂದು 848 ಸಾವು ಸಂಭವಿಸಿದ್ದು ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಬುಧವಾರ ಮಹಾರಾಷ್ಟ್ರದಲ್ಲಿ 334 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ತಮಿಳುನಾಡು (112), ಆಂಧ್ರ ಪ್ರದೇಶ (77), ಬಂಗಾಳ (61), ಪಂಜಾಬ್ (21), ಬಿಹಾರ (22) ಮತ್ತು ಪುದುಚೇರಿ (7) ಇದುವರೆಗಿನ ಗರಿಷ್ಠ ಸಂಖ್ಯೆಯ ಸಾವನ್ನು ಕಂಡಿವೆ. ಕರ್ನಾಟಕದಲ್ಲೂ 100 ಮಂದಿ ಮೃತಪಟ್ಟಿದ್ದು, ದಿಲ್ಲಿಯಲ್ಲಿ ಒಂದು ತಿಂಗಳಲ್ಲೇ ಕನಿಷ್ಠ ಅಂದರೆ 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News