ನೆಹರೂ ದೂರದೃಷ್ಟಿಯನ್ನು ನೆನೆಯೋಣ... ಆದರೆ ಏಮ್ಸ್ ಹಿಂದಿರುವ ಈ ಮಹಿಳೆಯನ್ನು ಮರೆಯದಿರೋಣ..

Update: 2020-08-06 03:59 GMT

ಹೊಸದಿಲ್ಲಿ, ಆ.6: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಅಸಂಖ್ಯಾತ ಮಂದಿಯ ಪಾಲಿಗೆ ಆಶಾಕಿರಣ. ಆದರೆ ಈ ಕಲ್ಪನೆ ಸಾಕಾರಗೊಳಿಸಿದ್ದು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ. ಆದರೆ ದೇಶದ ಈ ಅತ್ಯುನ್ನತ ವೈದ್ಯಕೀಯ ಸಂಸ್ಥೆಯ ಸೃಷ್ಟಿಗೆ ಕಾರಣ ಒಬ್ಬ ಮಹಿಳೆ ಎನ್ನುವುದು ಎಷ್ಟೋ ಮಂದಿಗೆ ಗೊತ್ತಿಲ್ಲ.

ರಾಜಕುಮಾರಿ ಅಮೃತ್ ಕೌರ್ ಅವರು ಲಕ್ನೋದ ಕಪುರ್ತಲದ ರಾಜಕುಮಾರಿ. ಇವರು ನೆಹರೂ ಸರ್ಕಾರದಲ್ಲಿ ದೇಶದ ಮೊಟ್ಟಮೊದಲ ಆರೋಗ್ಯ ಸಚಿವೆಯೂ ಆಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಆಡಳಿತ ಮಂಡಳಿ ಮುಖ್ಯಸ್ಥೆಯಾದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಇವರದ್ದು. ಇವರೇ ಏಮ್ಸ್ ಪರಿಕಲ್ಪನೆಯ ಅಡಿಗಲ್ಲು.

ಆದರೆ ಇವರ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ? ಇದು ಟ್ವಿಟ್ಟರ್‌ನಲ್ಲಿ ಇತ್ತೀಚೆಗೆ ಮೂಡಿಬಂದ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರ ಪ್ರಶ್ನೆ.

ಎಐಐಎಂಎಸ್‌ನ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ್ ಎಂಬುವವರು ಟ್ವೀಟ್ ಮಾಡಿದ ಫೋಟೊವೊಂದಕ್ಕೆ ಪ್ರತಿಕ್ರಿಯಿಸಿದ ಡಾ.ಸೊನಾಲಿ ವಯೀದ್ ಈ ಚರ್ಚೆಗೆ ಮುನ್ನುಡಿ ಬರೆದವರು. ನೆಹರೂ ಅವರು ತಮ್ಮ ಸಚಿವರು ಹಾಗೂ ವಾಸ್ತುಶಿಲ್ಪಿಗಳ ತಂಡದ ಜತೆಗೆ ಎಐಐಎಂಎಸ್ ಮಾದರಿಯನ್ನು ವೀಕ್ಷಿಸುತ್ತಿರುವ ಚಿತ್ರವನ್ನು ಡಾ.ಶ್ರೀನಿವಾಸ್ ಟ್ವೀಟ್ ಮಾಡಿದ್ದರು. ಈ ಫೋಟೊ ಜತೆಗೆ ಈ ಸಂಸ್ಥೆ ಹುಟ್ಟುಹಾಕಲು ಕಾರಣರಾದವರು ಎಂದು ನೆಹರೂ ಅವರನ್ನು ಬಣ್ಣಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸೊನಾಲಿ, ವಾಸ್ತವವಾಗಿ ಅಂದಿನ ಆರೋಗ್ಯ ಸಚಿವೆಯಾಗಿದ್ದ ಅಮೃತ್ ಕೌರ್ ಅವರ ದೂರದೃಷ್ಟಿ ಈ ಸಂಸ್ಥೆಯ ಸೃಷ್ಟಿಗೆ ಕಾರಣ ಎಂದು ಹೇಳಿದ್ದಾರೆ.
'ಏಮ್ಸ್ ಅವರ ದೂರದೃಷ್ಟಿಯ ಫಲ. ಭಾರತದ ಪ್ರಥಮ ಆರೋಗ್ಯ ಸಚಿವೆ ಅಮೃತಾ ಕೌರ್ ಮಹಿಳಾ ನಾಯಕತ್ವದ ಇತಿಹಾಸಕ್ಕೆ ಮತ್ತು ಹಲವು ಪ್ರಥಮಗಳಿಗೆ ನಾಂದಿ ಹಾಡಿದರು' ಎಂದು ಅವರು ಬಣ್ಣಿಸಿದ್ದಾರೆ.

ಅಮೃತ್ ಕೌರ್ ಆಕ್ಸ್‌ಫರ್ಡ್ ವಿವಿ ಪದವೀಧರೆ. ಬಾಲ್ಯದಿಂದಲೇ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಆದರೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರವಾಗುವ ಸಂದರ್ಭದಲ್ಲಿ ಗೋಪಾಲಕೃಷ್ಣ ಗೋಖಲೆಯವರ ಪ್ರಭಾವದಿಂದ ಹೋರಾಟಕ್ಕೆ ಧುಮುಕಿದರು. ಬಳಿಕ ಸಮಾಜ ಸುಧಾರಕರಾಗಿ ಹೆಸರು ಮಾಡಿದರು. ಅವರು ಆಲ್ ಇಂಡಿಯಾ ಸರ್ವೆಂಟ್ಸ್ ಪಾರ್ಟಿ ಎಂಬ ಸಂಘಟನೆ ರಚಿಸಿ ಸೌಲಭ್ಯವಂಚಿತರ ಸೇವೆ ಮಾಡಿದರು. 1926ರ ವೇಳೆಗೆ ಅಖಿಲ ಭಾರತ ಮಹಿಳಾ ಮಂಡಳಿಯನ್ನು ರಚಿಸಿ ಮಹಿಳೆಯರ ಹಕ್ಕಿಗಾಗಿ ಹೋರಾಡಿದರು. ರಾಜಕೀಯದಲ್ಲಿ ಮಹಿಳಾ ಶಕ್ತಿಯ ಪರಿಚಯ ಮಾಡಿಕೊಟ್ಟರು. ರಾಷ್ಟ್ರೀಯ ಚಳವಳಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಲೂ ಕೊಡುಗೆ ನೀಡಿದ ಅವರು, ನೆಹರೂ ಸರ್ಕಾರ ರಚನೆಯಾಗುವವರೆಗೆ ಮಹಾತ್ಮ ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದರು. ನೆಹರೂ ಸಂಪುಟದಲ್ಲಿ ಆರೋಗ್ಯ ಸಚಿವೆಯಾಗಿ, ಬಡ ಹಾಗೂ ಶ್ರೀಮಂತ ವರ್ಗದವರೆಂಬ ಬೇಧಭಾವ ಇಲ್ಲದೇ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಕನಸು ಕಂಡು ಏಮ್ಸ್ ಹುಟ್ಟಿಗೆ ಕಾರಣರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News