ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ 8 ಉತ್ಪನ್ನ ಬಿಡುಗಡೆ ಮಾಡಿದ ಡಿಸಿಎಂ ಡಾ.ಅಶ್ವತ್ಥ ನಾರಾಯಣ

Update: 2020-08-06 12:40 GMT
Photo: Twitter(@KarnatakaVarthe)

ಬೆಂಗಳೂರು, ಆ. 6: ಕೋವಿಡ್-19 ವಿರುದ್ಧ ಹೋರಾಡಲು ಅತ್ಯಂತ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಹಾಗೂ ವೈರಾಣು ಹರಡುವಿಕೆ ತಹಬಂದಿಗೆ ತರಲು ಪೂರಕವಾದ ಎಂಟು ವಿವಿಧ ಉತ್ಪನ್ನಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗುರುವಾರ ಬಿಡುಗಡೆ ಮಾಡಿದರು.

ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್), ವ್ಯಾಪ್ತಿಯ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರ(ಬಿಬಿಸಿ-ಬೆಂಗಳೂರು ಬಯೊ ಇನ್ನೋವೇಷನ್ ಕೇಂದ್ರ)ದಲ್ಲಿ ಅಭಿವೃದ್ಧಿಪಡಿಸಿರುವ ಈ ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಲೋಕಾರ್ಪಣೆ ಮಾಡಿದರು.

ಬಿಬಿಸಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳ ನವೋದ್ಯಮಿಗಳು ಈ ರೀತಿಯ ಹೊಸ ರೀತಿಯ ಆವಿಷ್ಕಾರಗಳನ್ನು ಮಾಡುತ್ತಿದ್ದು, ಅವು ಕೋವಿಡ್-19 ವಿರುದ್ಧ ಹೋರಾಡಲು ನೆರವಾಗುತ್ತಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಈ ನಿಟ್ಟಿನಲ್ಲಿ ಮಹತ್ವದ ವೇದಿಕೆಯನ್ನು ಕಲ್ಪಿಸುತ್ತಿದ್ದು, ದೇಶದಲ್ಲಿಯೇ ಮಾದರಿಯಾದಂತಹ ಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಬಿಸಿ ಪ್ರದರ್ಶನ ಮೇಳದಲ್ಲಿ ಈ ಮುಂಚೆಯೇ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿರುವ ಪಟ್ಟಿಗೆ ಈ ಹೊಸ ಉತ್ಪನ್ನಗಳು ಹಾಗೂ ತಾಂತ್ರಿಕ ನಮೂನೆಗಳು ಸೇರಿಕೊಂಡಂತಾಗಿವೆ. ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಬಲ್ಲ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಸದೃಢ ಆವಿಷ್ಕಾರಿ ವಾತಾವರಣದಿಂದಾಗಿ ಇದು ಸಾಧ್ಯವಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದರು.

ಕೊರೋನ ಸೋಂಕಿನ ವಿರುದ್ಧ ಹೋರಾಡಲು ಸೂಕ್ತ ಸಮಯದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇಂತಹ ಇನ್ನಷ್ಟು ತಾಂತ್ರಿಕತೆ ಮತ್ತು ಉತ್ಪನ್ನಗಳು ಬಿಡುಗಡೆಗೊಳ್ಳುವ ಹಂತದಲ್ಲಿವೆ ಎಂದು  ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಅಧ್ಯಕ್ಷ ಡಾ.ಇ.ವಿ.ರಮಣ ರೆಡ್ಡಿ ಹೇಳಿದರು.

ಬಿಬಿಸಿಯಂತಹ ಬಯೋ-ಇನ್ ಕ್ಯುಬೇಟರ್‍ನಲ್ಲಿ ಈ ಉತ್ಪನ್ನಗಳು ಅಭಿವೃದ್ಧಿಗೊಂಡಿರುವುದು ಪ್ರಧಾನಿ ಮೋದಿ ಅವರ `ಆತ್ಮನಿರ್ಭರ' ಕರೆಗೆ ಸ್ಟಾರ್ಟ್‍ಅಪ್‍ಗಳು ಪೂರಕವಾಗಿ ಸ್ಪಂದಿಸಿರುವುದನ್ನು ಸೂಚಿಸುತ್ತದೆ. ಬಿಬಿಸಿ ಹಾಗೂ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್(ಐಐಎಂ) ನಡುವಿನ ಸಹಯೋಗವು ಈ ಉತ್ಪನ್ನಗಳ ಹೆಚ್ಚಿನ ತಯಾರಿಕೆ, ಮಾರುಕಟ್ಟೆ ವಿಶ್ಲೇಷಣೆ ಹಾಗೂ ಅಧಿಕ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಬೇಕು ಎಂದ ಕೇಂದ್ರ ಸರಕಾರದ ಪ್ರಧಾನ ಸಲಹೆಗಾರ ಪ್ರೊ.ವಿಜಯ್ ರಾಘವನ್ ಅಭಿಪ್ರಾಯಪಟ್ಟರು.

ಐಟಿ-ಬಿಟಿ ನಿರ್ದೇಶನಾಲಯದ ನಿರ್ದೇಶಕಿ ಹಾಗೂ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ(ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್ ಮಾತನಾಡಿ, ಈ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ವಿತರಣೆಗೆ ಎಲ್ಲ ನೆರವು ನೀಡುವುದಾಗಿ ತಿಳಿಸಿದರು. ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವ ಕಾರ್ಡಿಯಾಕ್ ಡಿಸೈನ್, ಮಲ್ಲಿಪಾತ್ರ, ಆಸ್ಪರ್ಟಿಕ ಮತ್ತು ಕ್ರಿಮ್ಮಿ ಬಯೋಟೆಕ್ ಕಂಪನಿಗಳಿಗೆ ಉನ್ನತಿ-100 ಕಾರ್ಯಕ್ರಮದಡಿ ಅನುದಾನ ಒದಗಿಸುವ ಜೊತೆಗೆ ಬಿಬಿಸಿಯಲ್ಲಿ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್ ಮಾತನಾಡಿ, ಕರ್ನಾಟಕ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯ ಕಿಟ್ಸ್ ನೆರವಿನಿಂದ ಬಿಬಿಸಿಯು ಉದ್ಯಮ ಪೂರಕ ಸದೃಢ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದು ಅದು ಉತ್ತಮ ಫಲ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಕಡಿಮೆ ಸಮಯದಲ್ಲಿ ಈ ಉತ್ಪನ್ನಗಳು ಅಭಿವೃದ್ಧಿಗೊಂಡಿರುವುದೇ ಇದನ್ನು ಸೂಚಿಸುತ್ತದೆ ಎಂದು ವಿವರಿಸಿದರು.

ಕೋವಿಡ್-19 ವಿರುದ್ಧ ಹೋರಾಡಲು ಪೂರಕವಾದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮುಂದಾಗುವವರಿಗಾಗಿ ನೆರವು ವೇದಿಕೆಯನ್ನು ಬಿಬಿಸಿ ಆರಂಭಿಸಿದೆ. ರೋಗ ದೃಢೀಕರಣ ಮತ್ತು ಥೆರಪಿಗೆ ಅನುಕೂಲಕರವಾದ ಕೆಲವು ಉತ್ಪನ್ನಗಳನ್ನು ಕೇಂದ್ರದಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಜಿತೇಂದ್ರ ಕುಮಾರ್ ತಿಳಿಸಿದರು.

ಒಪ್ಪಂದ: ಇದೇ ಸಂದರ್ಭದಲ್ಲಿ ಬೆಂಗಳೂರು ಐಐಎಂ ಮತ್ತು ಬಿಬಿಸಿ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಐಐಎಂ ಪರವಾಗಿ ಡೀನ್ ಪ್ರೊ.ಕೆ.ಕುಮಾರ್ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿ, ಈ ಒಪ್ಪಂದವು ಸ್ಟಾರ್ಟ್‍ಅಪ್‍ಗಳಿಗೆ ದೊಡ್ಡ ವಹಿವಾಟು ನಡೆಸಲು ಅನುವು ಮಾಡಿಕೊಡಲಿದೆ ಎಂದರು.

`ಪದ್ಮ ವೈಟಲ್ಸ್, ಮಲ್ಲೀಸ್ ಕಾರ್ಡಿಟಿ, ಸಿಡಿ-4 ಶೀಲ್ಡ್, ಭೀಮ್ ರೋಟಿ, ಇಮ್ಯೂನ್ ಬೂಸ್ಟರ್-ಡೈಲಿ ಡ್ರಾಪ್ಸ್, ವೆಜ್ ಫಲ್ ಸ್ಯಾನಿಟೈಸರ್, ವಾಟರ್ ಸ್ಯಾನಿಟೈಸರ್, ಆಂಟಿ-ಮೈಕ್ರೋಬಿಯಲ್ ಎಚ್‍ವಿಎಸಿ ಮಾಡ್ಯೂಲ್ ಇವು ಅಭಿವೃದ್ಧಿಗೊಂಡಿರುವ ವಿವಿಧ ಉತ್ಪನ್ನಗಳಾಗಿವೆ'
-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News