ರಾಜಧಾನಿಯಲ್ಲಿ 2,147 ಕೊರೋನ ಪ್ರಕರಣ ದೃಢ, 22 ಮಂದಿ ಮೃತ್ಯು

Update: 2020-08-07 18:35 GMT

ಬೆಂಗಳೂರು, ಆ.7: ನಗರದಲ್ಲಿ ಶುಕ್ರವಾರ ಒಂದೇ ದಿನ 2,147 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು. ಸೋಂಕಿಗೆ 22 ಜನರು ಮೃತರಾಗಿದ್ದಾರೆ. ಅಲ್ಲದೆ, 1,131 ಮಂದಿ ಗುಣಮುಖರಾಗಿದ್ದಾರೆ.

 ನಗರದಲ್ಲಿ ಒಟ್ಟು 69,572 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,200 ಜನರು ಸೋಂಕಿಗೆ ಬಲಿಯಾಗಿದ್ದಾರೆ. 35,063 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,308 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರಚಿಕಿತ್ಸಾಲಯದಲ್ಲಿ ಒಟ್ಟು 73,972 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಗುರುವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 13,635 ಕಂಟೈನ್ಮೆಂಟ್ ಜೋನ್‌ಗಳಿವೆ. ಇದುವರೆಗೂ 26,339 ಕಂಟೈನ್ಮೆಂಟ್ ಜೋನ್‌ಗಳನ್ನು ಗುರುತಿಸಲಾಗಿದೆ.

ಮೂರು ಬಾರಿ ನೆಗೆಟಿವ್ ಬಂದರೂ ಚಿಕಿತ್ಸೆ: ಮೂರು ಬಾರಿ ಕೊರೋನ ನೆಗೆಟಿವ್ ಬಂದರೋಗಿಗೆ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದಕ್ಕಾಗಿ 4 ಲಕ್ಷ ರೂ. ಬಿಲ್ ಮಾಡಲಾಗಿದೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ. 52 ವರ್ಷದ ವ್ಯಕ್ತಿ ಜು.21ರಂದು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಉಸಿರಾಟದ ಸಮಸ್ಯೆ ಎಂದು ಹೋಗಿದ್ದಾರೆ. ಬಳಿಕ ಅಲ್ಲಿನ ವೈದ್ಯರು ರೋಗಿಗೆ ಕೊರೋನ ಸೋಂಕು ತಗುಲಿದೆ ಎಂದು ಹೇಳಿ ಅಂದಿನಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಮೂರು ಬಾರಿ ಕೊರೋನ ಪರೀಕ್ಷೆ ಮಾಡಿದರೂ ನೆಗೆಟಿವ್ ಎಂದು ವರದಿ ಬಂದಿದೆ. ಆದರೆ, ಪಾಸಿಟಿವ್ ಎಂದು ಸುಳ್ಳು ಹೇಳಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಚಿಕಿತ್ಸೆಗೆಂದು 4 ಲಕ್ಷ ಬಿಲ್ ಮಾಡಲಾಗಿದೆ. ಇದರಲ್ಲಿ 2.50 ಲಕ್ಷ ರೂ. ಪಾವತಿಸಿದ್ದೇವೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

ಬಿಎಂಟಿಸಿ ಕಂಡಕ್ಟರ್ ಮೃತ್ಯು: ಹಣ ಪಾವತಿಸಲು ಪರದಾಟ
ಕೊರೋನ ಸೋಂಕಿನಿಂದ ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಸಾವನ್ನಪ್ಪಿದ್ದು, ಆಸ್ಪತ್ರೆ ಬಿಲ್ ಪಾವತಿಸಲಾಗದೆ ಆತನ ಪತ್ನಿ ಹಾಗೂ ಮಕ್ಕಳು ಆಸ್ಪತ್ರೆ ಎದುರು ಕಣ್ಣೀರಿಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಮೃತನನ್ನು ಚಿಕ್ಕಬಾಣವರದಲ್ಲಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದು, ಆಸ್ಪತ್ರೆ ಸಿಬ್ಬಂದಿ 1.8 ಲಕ್ಷ ಹಣ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.

ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯ ಆರೋಪ: ವೃದ್ಧೆ ಬಲಿ

ಮಹಾಲಕ್ಷ್ಮೀಲೇಔಟ್‌ನ 70 ವರ್ಷದ ವೃದ್ಧೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ಇತ್ತೀಚೆಗೆ ಆರೋಗ್ಯ ಸಮಸ್ಯೆ ಕಾಣಿಸಿದೆ. ತಕ್ಷಣ ಅವರನ್ನು ವೆಸ್ಟ್ ಆಫ್ ಕಾರ್ಡ್‌ರೋಡ್‌ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದೆ. ಆದರೆಇಲ್ಲಿ ನಾನ್‌ಕೋವಿಡ್ ರೋಗಿಗಳಿಗೆ ಬೆಡ್ ಇಲ್ಲ ಎಂದು ಹೇಳಿ ವೈದ್ಯರು ಕಳುಹಿಸಿದ್ದಾರೆ. ಕೊನೆಗೆ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ವೃದ್ಧೆ ಮೃತಪಟ್ಟಿದ್ದಾರೆ ಎಂದು ವೃದ್ಧೆಯ ಸಂಬಂಧಿಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News