ಜಮ್ಮುಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮನೋಜ್ ಸಿನ್ಹಾ ಪ್ರಮಾಣ ವಚನ ಸ್ವೀಕಾರ

Update: 2020-08-07 18:54 GMT

ಶ್ರೀನಗರ, ಆ.7: ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಕೇಂದ್ರದ ಮಾಜಿ ಸಚಿವ ಮನೋಜ್ ಸಿನ್ಹಾ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸುತ್ತಿರುವ ಮೊದಲ ರಾಜಕೀಯ ನಾಯಕ ಮನೋಜ್ ಸಿನ್ಹಾ.

 ಇಲ್ಲಿನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ 61 ವರ್ಷದ ಮನೋಜ್ ಸಿನ್ಹಾ ಅವರಿಗೆ ಜಮ್ಮು ಹಾಗೂ ಕಾಶ್ರೀರದ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತೆಲ್ ಪ್ರಮಾಣ ವಚನ ಬೋಧಿಸಿದರು.

ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿರುವ ಹಾಗೂ ಗುರುವಾರ ಮಹಾಲೇಖಪಾಲರಾಗಿ ನಿಯೋಜಿತರಾಗಿರುವ ಮಾಜಿ ಐಎಎಸ್ ಅಧಿಕಾರಿ ಗಿರೀಶ್ ಚಂದ್ರ ಮುರ್ಮು ಅವರ ಸ್ಥಾನವನ್ನು ಮನೋಜ್ ಸಿನ್ಹಾ ತುಂಬಲಿದ್ದಾರೆ.

ಸರಳವಾಗಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಫಾರೂಕ್ ಖಾನ್ ಹಾಗೂ ಬಷೀರ್ ಖಾನ್ ಸೇರಿದಂತೆ ಹಿಂದಿನ ಲೆಫ್ಟಿನೆಂಟ್ ಗವರ್ನರರ ಸಲಹೆಗಾರರು, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಉಪಸ್ಥಿತರಿದ್ದರು.

ರಾಜ್ಯ ಸಭಾ ಸದಸ್ಯ ನಾಝಿರ್ ಅಹ್ಮದ್ ಲಾವೆ, ಬಿಜೆಪಿಯ ಲೋಕಸಭಾ ಸದಸ್ಯ ಜುಗಲ್ ಕಿಶೋರ್ ಶರ್ಮಾ, ಜಮ್ಮು ಹಾಗೂ ಕಾಶ್ಮೀರ ಆಪ್ನಿ ಪಕ್ಷದ ನಾಯಕ ಗುಲಾಮ್ ಹಸನ್ ಮಿರ್ ಕೂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News