ಕೇರಳದ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಕ್ಯಾಪ್ಟನ್ ದೀಪಕ್ ವಾಯುಪಡೆಯ ಮಾಜಿ ಫೈಟರ್ ಪೈಲಟ್

Update: 2020-08-08 05:07 GMT

ಹೊಸದಿಲ್ಲಿ, ಆ.8: ಕೇರಳದ ಕೋಝಿುಕ್ಕೋಡ್‌ನ ವಿಮಾನ ನಿಲ್ದಾಣದ ರನ್‌ವೇ ಯಲ್ಲಿ ಇಳಿಯುತ್ತಿದ್ದಾಗ ಜಾರಿ ಕಣಿವೆಗೆ ಬಿದ್ದು ಇಬ್ಭಾಗವಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುರಂತದಲ್ಲಿ 18 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರಲ್ಲಿ ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಥೆ ಹಾಗೂ ಕ್ಯಾಪ್ಟನ್ ಅಖಿಲೇಶ್ ಕುಮಾರ್ ಅವರಿದ್ದಾರೆ.

ವಿಂಗ್ ಕಮಾಂಡರ್ ದೀಪಕ್ ವಿ. ಸಾಥೆ ಭಾರತೀಯ ವಾಯು ಪಡೆಯ ಮಾಜಿ ಫೈಟರ್ ಪೈಲಟ್ ಆಗಿದ್ದವರು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ್ನು ಚಲಾಯಿಸುವ ಮೊದಲು ಅವರು ಏರ್ ಇಂಡಿಯಾ ವಿಮಾನಗಳನ್ನು ಹಾರಿಸುತ್ತಿದ್ದರು. ನ್ಯಾಶನಲ್ ಡಿಫೆನ್ಸ್ ಅಕಾಡಮಿಯ(ಎನ್‌ಡಿಎ) ಹಳೆ ವಿದ್ಯಾರ್ಥಿಯಾಗಿರುವ ದೀಪಕ್ ಅವರು ಬೋಯಿಂಗ್ 737 ವಿಮಾನಗಳನ್ನು ಹಾರಿಸುವುದರಲ್ಲಿ ಬಹಳ ಅನುಭವಿಯಾಗಿದ್ದರು.

ಕ್ಯಾಪ್ಟನ್ ದೀಪಕ್ ವಿ. ಸಾಥೆ ಎನ್‌ಡಿಎನ 58ನೇ ಕೋರ್ಸ್‌ನವರಾಗಿದ್ದರು. ಅವರು ಜೂಲಿಯೆಟ್ ಸ್ಕ್ವಾಡ್ರನ್‌ನ್ ಸೇರಿದವರಾಗಿದ್ದರು ಎಂದು ಏರ್ ಮಾರ್ಷಲ್ ಭೂಷಣ್ ಗೋಖಲೆ(ನಿವೃತ್ತ)ಪಿಟಿಐ ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

ದೀಪಕ್ ಅವರು ಜೂನ್ 1981ರಲ್ಲಿ ಹೈದರಾಬಾದ್‌ನ ವಾಯುಪಡೆಯ ಅಕಾಡಮಿಯಿಂದ ಸ್ವಾರ್ಡ್ ಆಫ್ ಹಾನರ್‌ನಿಂದ ಉತ್ತೀರ್ಣರಾಗಿದ್ದರು. ಅವರು ಅತ್ಯುತ್ತಮ ಸ್ಕ್ವ್ಯಾಷ್ ಆಟಗಾರನಾಗಿದ್ದರು ಎಂದು ಅವರನ್ನು ಗೋಖಲೆ ನೆನಪಿಸಿಕೊಂಡರು.

ದೀಪಕ್ ಅವರು ತುಂಬಾ ವೃತ್ತಿಪರರಾಗಿದ್ದರು ಹಾಗೂ 58 ಎನ್‌ಡಿಎ ಅಧ್ಯಕ್ಷ ಚಿನ್ನದ ಪದಕವನ್ನು ಪಡೆದಿದ್ದರು. ಅವರು ವಾಯುಪಡೆಗೆ ಪರೀಕ್ಷಾ ಪೈಲಟ್ ಆಗಿದ್ದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ವರದಿಗಳ ಪ್ರಕಾರ ಕ್ಯಾಪ್ಟನ್ ದೀಪಕ್ ಸಾಥೆ ಏರ್ ಇಂಡಿಯಕ್ಕಾಗಿ ಏರ್‌ಬಸ್ 310 ಗಳನ್ನು ಹಾರಿಸಿದ್ದಾರೆ. ಅವರು ವಾಣಿಜ್ಯ ಪೈಲಟ್ ಆಗಲು ನಿರ್ಧರಿಸುವ ಮೊದಲು ಅವರು ನಿಪುಣ ಫೈಟರ್ ಪೈಲಟ್ ಆಗಿದ್ದರು.

ಅವರ ಸಹ ಪೈಲಟ್ ಆಗಿದ್ದ ಕ್ಯಾಪ್ಟನ್ ಅಖಿಲೇಶ್ ಕುಮಾರ್ ಅವರು ಕಳೆದ ವರ್ಷ ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News