ನೆರೆಯಲ್ಲೂ ರಾಜಕೀಯ: ಪ್ರತಿಪಕ್ಷಕ್ಕೆ ಡಿಸಿಎಂ ಅಶ್ವತ್ಥನಾರಾಯಣ ತರಾಟೆ

Update: 2020-08-08 07:52 GMT

ಬೆಂಗಳೂರು, ಆ.8: ಅತಿವೃಷ್ಟಿ ಮತ್ತು ನೆರೆಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸರಕಾರಕ್ಕೆ ರಚನಾತ್ಮಕವಾಗಿ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ನಿಮಿತ್ತ ವಿಧಾನಸೌಧ ಬಳಿ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ, ಇಷ್ಟು ದಿನ ಕೋವಿಡ್ ಇಟ್ಟುಕೊಂಡು ಟೀಕಿಸಿದರು. ಈಗ ನೆರೆ-ಪ್ರವಾಹ ಸಿಕ್ಕಿದೆ. ಒಟ್ಟಿನಲ್ಲಿ ಯಾವುದಾದರೊಂದು ವಿಷಯ ಇಟ್ಟುಕೊಂಡು ಸರಕಾರವನ್ನು ‘ವಿರೋಧ’ ಮಾಡುವುದೇ ವಿರೋಧ ಪಕ್ಷದ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

ಕೋವಿಡ್ ನಂತರ ಬಂದಿರುವ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಸಮರ್ಥವಾಗಿ ಎದುರಿಸುತ್ತಿದೆ. ಅಪಾಯದ ಸ್ಥಳಗಳಿಂದ  ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಸಂತ್ರಸ್ತರಿಗೆ 10 ಸಾವಿರ ರೂ. ಹಾಗೂ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು ಕೊಡಲಾಗುವುದು. ಕಳೆದ ವರ್ಷ ಉತ್ತಕ ಕರ್ನಾಟಕ ಪ್ರದೇಶದ ನೆರೆ ಸಂತ್ರಸ್ತರಿಗೆ ನೆರವಾದ ರೀತಿಯಲ್ಲೇ ಸಕಲ ರೀತಿಯ ಸಹಾಯ ಹಸ್ತ ಚಾಚಲಾಗುವುದು. ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಉಳಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಸಂಕಷ್ಟಕ್ಕೆ ಈಡಾಗಿರುವ ಎಲ್ಲ ಜಿಲ್ಲೆಗಳಿಗೂ ಅಗತ್ಯ ಸಂಪನ್ಮೂಲಗಳನ್ನು, ಸಾಮಗ್ರಿಗಳನ್ನು ಒದಗಿಸಲಾಗಿದೆ. ಜತೆಗೆ, ವೈದ್ಯಕೀಯ ನೆರವನ್ನು ನೀಡಲಾಗಿದೆ. ಎಷ್ಟು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗಬೇಕೋ ಅಷ್ಟೆಲ್ಲ ರೀತಿಯಲ್ಲಿ ಸಹಾಯ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News