ಉದ್ಯೋಗ ನಷ್ಟ, ವಿವಾಹ, ಅನಾರೋಗ್ಯ..: ಅಪಘಾತಕ್ಕೀಡಾದ ವಿಮಾನದಲ್ಲಿದ್ದವರ ಹಿಂದೆ ಹಲವು ಕಥೆಗಳು

Update: 2020-08-08 12:04 GMT

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್‍ ನಲ್ಲಿ ನಿನ್ನೆ ಅವಘಡಕ್ಕೀಡಾಗಿ ಇಬ್ಭಾಗವಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿದ್ದ 184 ಪ್ರಯಾಣಿಕರ ಪೈಕಿ 54 ಮಂದಿ ದುಬೈಯಲ್ಲಿ ಸಿಲುಕಿದ್ದ ಪ್ರಯಾಣಿಕರಾಗಿದ್ದರೆ, 26 ಮಂದಿ ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ವಾಪಸಾಗುತ್ತಿದ್ದರು. ಉಳಿದಂತೆ 28 ಮಂದಿಯ ವೀಸಾ ಅವಧಿ ಮುಕ್ತಾಯಗೊಂಡಿದ್ದರೆ, ಆರು ಮಂದಿ ವೈದ್ಯಕೀಯ ಕಾರಣಗಳಿಗಾಗಿ ತವರು ದೇಶಕ್ಕೆ ಮರಳುತ್ತಿದ್ದರು.

“ನನ್ನ ತಂದೆ ಅಬುಧಾಬಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಸಮಸ್ಯೆಯ ನಂತರ ಅವರು ವಾಪಸ್ ಬರಬೇಕೆಂದು ನಾವು ಬಯಸಿದ್ದೆವು. ಇದೀಗ ನಡೆದ ದುರಂತ ನಮಗೆ ಆಘಾತ ತಂದಿದೆ. ಆದರೆ ಅದೃಷ್ಟವಶಾತ್ ನಮ್ಮ ತಂದೆಗೆ ಗಂಭೀರ ಗಾಯಗಳಾಗಿಲ್ಲ'' ಎಂದು 16 ವರ್ಷದ ಅಭಿನಂದನ್ ಭಾವುಕರಾಗಿ ಹೇಳುತ್ತಾರೆ. ಅವರ ತಂದೆ, 51 ವರ್ಷದ ಪುರುಷೋತ್ತಮ್ ಅವರ ಕಾಲಿನ ಮೂಳೆ ಮುರಿದಿದ್ದು, ಕೈಗಳಿಗೂ ಗಾಯಳಾಗಿವೆ. ಕೋಯಿಕ್ಕೋಡ್‍ ನ ಮೈತ್ರಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಮುಹಮ್ಮದ್ ಮುಸ್ತಫಾ ಕೆಲಸ ಕಳೆದುಕೊಂಡು ಊರಿಗೆ ಮರಳುತ್ತಿರುವಾಗ ಈ ದುರಂತ ಸಂಭವಿಸಿದೆ. “ಅವರಿಗೆ ಒಂಬತ್ತು ತಿಂಗಳಿನಿಂದ ವೇತನ ದೊರಕಿಲ್ಲದೇ ಇದ್ದುದರಿಂದ ವಾಪಸ್ ಬರಲು ಹೇಳಿದ್ದೆವು'' ಎಂದು ಮುಸ್ತಫಾ ಸೋದರಿ ಹೇಳಿತ್ತಾರೆ. ಮುಸ್ತಫಾಗೆ ಕೂಡ ಹಲವಾರು ಮೂಳೆ ಮುರಿತ ಉಂಟಾಗಿದ್ದು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರ್ಮಾಣ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ 36 ವರ್ಷದ ಅನೂಪ್ ನಾರಾಯಣನ್ ಅವರು ಕೂಡ ಮುಸ್ತಫಾ ಅವರಂತೆಯೇ ಉದ್ಯೋಗ ನಷ್ಟ ಅನುಭವಿಸಿ ವಾಪಸ್ ಬರುತ್ತಿರುವಾಗ ಈ ದುರಂತ ಸಂಭವಿಸಿದ್ದು ಅವರು ಕೂಡ ನಗರದ ಒಂದು ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಭವಿಸಿದಾಗಿನಿಂದ ಪಾಲಕ್ಕಾಡ್ ನಿವಾಸಿ ಉಮಾ ಅಝಕತ್ ಅವರು ಆಘಾತದಲ್ಲಿದ್ದಾರೆ. ಅವರ ಇಬ್ಬರು ಪುತ್ರರಾದ ಪರಮೇಶ್ವರನ್ ಹಾಗೂ ರವಿಶಂಕರ್, ಸೊಸೆ ತಾರಾ ಹಾಗೂ ಮೊಮ್ಮಗಳು ಆಯನಾ ಆ ವಿಮಾನದಲ್ಲಿದ್ದರು. ಪರಮೇಶ್ವರನ್ ಅವರ ವಿವಾಹ ಸೆಪ್ಟಂಬರ್ 10ರಂದು ನಡೆಯಲು ನಿಗದಿಯಾಗಿದ್ದರಿಂದ ಅವರು ಊರಿಗೆ ಮರಳುತ್ತಿದ್ದರು. ಅವರು ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಹಿರಿಯ ಸೋದರ ರವಿಶಂಕರ್ (34) ಅವರು ಅಬುಧಾಬಿಯಲ್ಲಿ ಬಯೋಮೆಡಿಕಲ್ ಇಂಜಿನಿಯರ್ ಆಗಿದ್ದಾರೆ.

“ಘಟನೆ  ನಡೆದು ಒಂದು ಗಂಟೆಗೂ ಹೆಚ್ಚು ಸಮಯದ ನಂತರ ಅವರ ಬಗ್ಗೆ ತಿಳಿದು ಬಂತು. ಪರಮೇಶ್ವರನ್ ಅವರಿಗೆ ಬೆನ್ನಿನ ಮೂಳೆಯ ಸಣ್ಣ ಶಸ್ತ್ರಕ್ರಿಯೆ ನಡೆದರೆ ರವಿಶಂಕರ್ ಅವರಿಗೆ ತೊಡೆ ಭಾಗದಲ್ಲಿ ಶಸ್ತ್ರಕ್ರಿಯೆ ನಡೆದಿದೆ'' ಎಂದು ಉಮಾ ವಿವರಿಸುತ್ತಾರೆ. ಅವರ ಸೊಸೆ ತಾರಾ ಅವರಿಗೂ ಶಸ್ತ್ರಕ್ರಿಯೆ ನಡೆಯಲಿದ್ದು, ಮೊಮ್ಮಗಳು ಕೂಡ ಆಸ್ಪತ್ರೆಯಲ್ಲಿದ್ದರೂ ಆಕೆಯ ಪರಿಸ್ಥಿತಿ ಕಳವಳಕಾರಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಅವರೆಲ್ಲರೂ ಸುರಕ್ಷಿತರಾಗಿರುವುದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳುವಾಗ ಉಮಾ ಭಾವುಕರಾಗುತ್ತಾರೆ.

ದುರಂತದಲ್ಲಿ ಮೃತಪಟ್ಟ ಸಿ ಪಿ ರಾಜೀವನ್ (61) ದುಬೈಯಲ್ಲಿ ವೆಲ್ಡರ್ ಆಗಿದ್ದರು., ಹಿರಿಯ ಪುತ್ರಿಗೆ ಸೂಕ್ತ ವರನ ಹುಡುಕಾಟಕ್ಕಾಗಿ ಆವರು ಊರಿಗೆ ವಾಪಸಾಗುತ್ತಿದ್ದರು. “ದುಬೈ ವಿಮಾನ ನಿಲ್ದಾಣದಿಂದ ಕರೆ ಮಾಡಿದ್ದ ಅವರು ತಮಗೆ ಕ್ವಾರಂಟೈನ್ ಆಗಬೇಕಿರುವುದರಿಂದ ಕೊಠಡಿ ಸಿದ್ಧಗೊಳಿಸುವಂತೆ ಹಾಗೂ ಅವರ ಅಚ್ಚುಮೆಚ್ಚಿನ ಆಹಾರ ಕೂಡ ತಯಾರಿಸುವಂತೆ ತಿಳಿಸಿದ್ದರು,'' ಎಂದು ರಾಜೀವನ್ ಅವರ ಸೋದರಿ ರಮಾ ಅಳುತ್ತಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News