ಪ್ರವಾಹ ಪರಿಸ್ಥಿತಿಯಲ್ಲೂ ವಿಪಕ್ಷಗಳ ರಾಜಕೀಯ: ಡಾ.ಅಶ್ವತ್ಥ ನಾರಾಯಣ ಆಕ್ಷೇಪ

Update: 2020-08-08 12:18 GMT

ಬೆಂಗಳೂರು, ಆ. 8: ಅತಿವೃಷ್ಟಿಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರಕಾರಕ್ಕೆ ರಚನಾತ್ಮಕ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ಶನಿವಾರ ಮಾಜಿ ಸಿಎಂ ನಿಜಲಿಂಗಪ್ಪ ಅವರ ಪುಣ್ಯತಿಥಿ ನಿಮಿತ್ತ ವಿಧಾನಸೌಧ ಬಳಿ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಕೋವಿಡ್-19 ನೆಪದಲ್ಲಿ ಸರಕಾರವನ್ನು ಟೀಕಿಸಿದರು. ಇದೀಗ ಭಾರೀ ಮಳೆ, ಪ್ರವಾಹ ಪರಿಸ್ಥಿತಿ ಅವರಿಗೆ ಸಿಕ್ಕಿದೆ. ಒಟ್ಟಿನಲ್ಲಿ ಯಾವುದಾದರೊಂದು ವಿಷಯ ಇಟ್ಟುಕೊಂಡು ಸರಕಾರವನ್ನು ವಿರೋಧ ಮಾಡುವುದೇ ವಿಪಕ್ಷಗಳ ಕೆಲಸವಾಗಿದೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಸರಕಾರಕ್ಕೆ ಹೆಗಲು ಕೊಡಬೇಕು. ಹೊಣೆಗಾರಿಕೆಯಿಂದ ಕೆಲಸ ಮಾಡಿ ಲೋಪವಿದ್ದರೆ ಎತ್ತಿ ತೋರಿಸಬೇಕು. ಆದರೆ, ಎಲ್ಲ ವಿಚಾರಗಳಲ್ಲಿಯೂ ರಾಜಕೀಯ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಲೇವಡಿ ಮಾಡಿದರು.

ಕೋವಿಡ್-19 ನಂತರ ಬಂದಿರುವ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಸಮರ್ಥವಾಗಿ ಎದುರಿಸುತ್ತಿದೆ. ಅಪಾಯದ ಸ್ಥಳಗಳಿಂದ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಸಂತ್ರಸ್ಥರಿಗೆ 10ಸಾವಿರ ರೂ.ಹಾಗೂ ಮನೆ ಕಳೆದುಕೊಂಡವರಿಗೆ 5ಲಕ್ಷ ರೂ.ನೆರವು ನೀಡಲಾಗುವುದು. ಉತ್ತಕ ಕರ್ನಾಟಕದಲ್ಲಿ ಈ ಹಿಂದೆ ನೆರೆ ಸಂತ್ರಸ್ಥರಿಗೆ ನೆರವಾದ ರೀತಿಯಲ್ಲೇ ಸಕಲ ರೀತಿಯ ಸಹಾಯ ಹಸ್ತ ಚಾಚಲಾಗುವುದು. ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದರು.

ಉಳಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಸಂಕಷ್ಟಕ್ಕೆ ಈಡಾಗಿರುವ ಎಲ್ಲ ಜಿಲ್ಲೆಗಳಿಗೂ ಅಗತ್ಯ ಸಂಪನ್ಮೂಲಗಳನ್ನು, ಸಾಮಗ್ರಿಗಳನ್ನು ಒದಗಿಸಲಾಗಿದೆ. ಜತೆಗೆ, ವೈದ್ಯಕೀಯ ನೆರವನ್ನು ನೀಡಲಾಗಿದೆ. ನೆರೆ ಸಂತ್ರಸ್ಥರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡಲಾಗುತ್ತಿದೆ ಎಂದರು.

`ವಾರಿಯರ್ಸ್'ಗೆ ಕಿವಿಮಾತು: ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸೇರಿ ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರೂ ತಮಗೆ ವಹಿಸಿರುವ ಕೆಲಸವನ್ನು ಮಾಡಲೇಬೇಕು. ಅವರಿಗೆ ಅಗತ್ಯವಾಗಿ ಬೇಕಿರುವ ಎಲ್ಲ ಸುರಕ್ಷತಾ ಸಾಧನಗಳನ್ನು ಈಗಾಗಲೇ ಸರಕಾರ ಒದಗಿಸಿದೆ. ಜತೆಗೆ ಕೋವಿಡ್ ಭತ್ಯೆ, ವಿಮೆ ಸೇರಿ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಕಾರದ ಕೆಲಸ ದೇವರ ಕೆಲಸ ಎನ್ನುವುದು ನಮ್ಮ ಧ್ಯೇಯವಾಕ್ಯ. ಇದಕ್ಕೆ ಮನ್ನಣೆ ಕೊಟ್ಟು ಕೂಡಲೇ ಗೈರಾದವರೆಲ್ಲರೂ ಕೆಲಸಕ್ಕೆ ಹಾಜರಾಗಬೇಕು. ತಪ್ಪಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೈದ್ಯರು ಗೈರು ಹಾಜರಾದರೆ ಕಾನೂನು ಕ್ರಮ

`ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಕೋವಿಡ್-19 ವೈರಾಣುವನ್ನು ಹತ್ತಿಕ್ಕಲು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪಾತ್ರ ದೊಡ್ಡದು. ಹೀಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವವರು ಕೂಡಲೇ ಹಾಜರಾಗಬೇಕು. ರಾಜ್ಯವೇ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಹೀಗೆ ಕರ್ತವ್ಯದಿಂದ ಪಲಾಯನ ಮಾಡುವುದು ಸರಿಯಲ್ಲ. ಕರ್ತವ್ಯಕ್ಕೆ ಗೈರು ಹಾಜರಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು'

-ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News