ಮರಣ ಪ್ರಮಾಣ ಪರಿಶೀಲಿಸಲು ಸಮಿತಿ ರಚನೆ: ಸಚಿವ ಡಾ.ಕೆ.ಸುಧಾಕರ್

Update: 2020-08-08 13:30 GMT

ಬೆಂಗಳೂರು, ಆ. 8: ಇಲ್ಲಿನ ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಮರಣ ಪ್ರಮಾಣ ಹೆಚ್ಚಳವಾಗಿದ್ದು, ಇದಕ್ಕೆ ಕಾರಣ ತಿಳಿಯಲು ಕೂಡಲೇ ತಜ್ಞರ ಸಮಿತಿ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಶನಿವಾರ ಇಎಸ್‍ಐ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಕೊರೋನ ಸೋಂಕಿತರಿಗೆ ದೊರೆಯುತ್ತಿರುವ ಚಿಕಿತ್ಸೆ, ಇತರೆ ಸೌಲಭ್ಯಗಳನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಈವರೆಗೆ 421 ಕೊರೋನ ಸೋಂಕಿತರು ದಾಖಲಾಗಿದ್ದು, ಈವರೆಗೆ 54 ರೋಗಿಗಳು ಮೃತಪಟ್ಟಿದ್ದು, ಮರಣ ಪ್ರಮಾಣ ಶೇ.12.8ರಷ್ಟಿದೆ ಎಂದು ವೈದ್ಯಾಧಿಕಾರಿಗಳು ಸಚಿವರಿಗೆ ವಿವರಿಸಿದರು. ಈ ರೀತಿ ಮರಣ ಹೆಚ್ಚಳವಾಗಲು ಕಾರಣ ಪತ್ತೆ ಮಾಡಬೇಕು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಸೂಚಿಸಿದರು.

ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇನ್ನೂ ಹಲವು ರೋಗಿಗಳು ವಿಳಂಬವಾಗಿ ಬಂದು ದಾಖಲಾಗಿದ್ದಾರೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಿದೆ. ಮರಣಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿ ರೂಪಿಸಲು ಆದೇಶಿಸಲಾಗಿದೆ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಹೇಳಿದರು.

ಇದೇ ವೇಳೆ ಸಚಿವ ಸುಧಾಕರ್, ವೀಡಿಯೋ ಮೂಲಕ ರೋಗಿಗಳೊಂದಿಗೆ ಮಾತುಕತೆ ನಡೆಸಿ ಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಅವರು, ಇಎಸ್‍ಐ ಆಸ್ಪತ್ರೆಯಲ್ಲಿ 494 ಹಾಸಿಗೆಗಳಿದ್ದು, ಸುಮಾರು 150 ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಗಿದೆ. ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ. 10 ರೋಗಿಗಳು ಐಸಿಯುನಲ್ಲಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈ ಆಸ್ಪತ್ರೆಯಲ್ಲಿ ಮನೆಯ ಆರೈಕೆ ದೊರೆಯುತ್ತಿದೆ ಎಂದು ಶ್ಲಾಘಿಸಿದ್ದಾರೆ.

ಪಿಜಿ ವಿದ್ಯಾರ್ಥಿಗಳು ಮತ್ತು ವೈದ್ಯರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ ಮತ್ತಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದ ಅವರು, ಕೊರೋನ ಸೋಂಕಿತರಾಗಿದ್ದ 42 ಗರ್ಭಿಣಿಯರಿಗೆ ಇಎಸ್‍ಐನಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬ್ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಕೋವಿಡ್ ಆರೈಕೆ ಕೇಂದ್ರಗಳಲ್ಲಿ 1,500 ಹಾಸಿಗೆಗಳು ಖಾಲಿ ಇವೆ. ಹಾಸಿಗೆ ಸಾಕಷ್ಟು ಲಭ್ಯವಿದೆ. ಪ್ರತಿ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲಾಗಿದೆ. ಕೋವಿಡ್ ಪಿಡುಗು ನಿಯಂತ್ರಣಕ್ಕೆ ಪ್ರಧಾನಿ ಮೋದಿ ತೆಗೆದುಕೊಂಡ ನಿಲುವುಗಳನ್ನು ದೇಶದ ಶೇ.91ರಷ್ಟು ಜನರು ಒಪ್ಪಿದ್ದಾರೆಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಇದು ತಪ್ಪು ಎಂದಾದಲ್ಲಿ, ಅಷ್ಟೂ ಜನರ ಭಾವನೆಗಳಿಗೆ ವಿರುದ್ಧವಾಗಿ ಹೇಳಿದಂತಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News