ಬೆಂಗಳೂರು: ಕೊರೋನ ಸೋಂಕಿಗೆ ಇಂದು 18 ಮಂದಿ ಬಲಿ, 2229 ಮಂದಿ ಗುಣಮುಖ

Update: 2020-08-08 16:10 GMT

ಬೆಂಗಳೂರು, ಆ.8: ನಗರದಲ್ಲಿ ಶನಿವಾರ ಒಂದೆ ದಿನ 2,665 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು. ಸೋಂಕಿಗೆ 18 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 72,237 ಮಂದಿ ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,218 ಜನರು ಸೋಂಕಿಗೆ ಬಲಿಯಾಗಿದ್ದಾರೆ. 37,292 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಶನಿವಾರ 2,229 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,726 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರಚಿಕಿತ್ಸಾಲಯದಲ್ಲಿ ಒಟ್ಟು 77,733 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಶುಕ್ರವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 13,386 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೆ 26,998 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

ಸಹಾಯವಾಗದ ಸಹಾಯವಾಣಿ

ಕೊರೋನ ಹಿನ್ನೆಲೆ ಬಿಬಿಎಂಪಿ ಎಂಟು ವಲಯಗಳಲ್ಲಿ ಪ್ರತ್ಯೇಕ ಹೆಲ್ಪ್‍ಲೈನ್ ನಂಬರ್ ಮಾಡಿದ್ದರೂ ಗೊಂದಲ ಮುಂದುವರಿದಿದೆ. ಸಹಾಯವಾಣಿ ಸ್ವೀಕರಿಸುವ ಸಿಬ್ಬಂದಿಗೇ ಸರಿಯಾದ ಮಾಹಿತಿ ಇಲ್ಲವೆನ್ನಲಾಗುತ್ತಿದೆ.

ಯಾವುದೇ ಮಾಹಿತಿ ಕೋರಿ ಸಹಾಯವಾಣಿಗೆ ಫೋನ್ ಮಾಡಿದರೂ ಸಿಬ್ಬಂದಿಯಿಂದ ಅಸಮರ್ಪಕ ಮತ್ತು ಅಸಹಾಯಕ ಉತ್ತರ ಬರುತ್ತದೆ. ಎಂಟು ವಲಯಗಳ ಹಲವೆಡೆ ಹೆಲ್ಪ್ ಲೈನ್ ನಂಬರ್ ಗಳಿಗೆ ಫೋನ್ ಮಾಡಿದರೆ ರಿಸೀವ್ ಕೂಡ ಆಗುತ್ತಿಲ್ಲ ಎಂಬ ಆರೋಪಗಳಿವೆ. ಬೆಂಗಳೂರಿನ 98 ವಾರ್ಡ್ ಗಳಲ್ಲಿ ಆರೋಗ್ಯ ಸಹಾಯ ಕೇಂದ್ರಗಳಲ್ಲಿ ಕೊರೋನ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ನಿರ್ದಿಷ್ಟ ಮಾಹಿತಿ ಕೋರಿ ಸಹಾಯವಾಣಿಗೆ ಫೋನ್ ಮಾಡಿದರೆ ಆಗಲೂ ಅಸಮರ್ಪಕ ಉತ್ತರವೇ ಸಿಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಫೀವರ್ ಕ್ಲಿನಿಕ್

ಪಾಲಿಕೆ ಮತ್ತು ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ವತಿಯಿಂದ ವಾರ್ಡ್-49 ಲಿಂಗರಾಜಪುರಂ ಸರಕಾರಿ ಶಾಲೆಯಲ್ಲಿ ಫಿವರ್ ಕ್ಲಿನಿಕ್ ಆರಂಭವಾಗಿದ್ದು, ಉಚಿತ ಕೋವಿಡ್ ಸ್ಕ್ರೀನಿಂಗ್, ಗಂಟಲು ದ್ರವ ಸಂಗ್ರಹಣೆ ನಡೆಯುತ್ತಿದೆ. ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ವಹಿಸಲಾಗಿದೆ ಸಿಬ್ಬಂದಿಗಳು ಕಾರ್ಯನಿರ್ತರಾಗಿದ್ದು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಪಾಲಿಕೆ ಮೇಯರ್ ಗೌತಮ್‍ಕುಮಾರ್ ತಿಳಿಸಿದ್ದಾರೆ.

ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್ ನಲ್ಲಿ ಪ್ರವೇಶ ನಿರ್ಬಂಧ

ನಗರದ ಇಸ್ಕಾನ್ ದೇವಸ್ಥಾನದಲ್ಲಿ ಆ.11 ಮತ್ತು ಆ.12ರಂದು ನಡೆಯುವ ಕೃಷ್ಣ ಜನಾಷ್ಠ್ಟಮಿ ವಿಶೇಷ ಪೂಜೆಯನ್ನು ಆನ್‍ಲೈನ್‍ನಲ್ಲಿ ವೀಕ್ಷಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಕೋವಿಡ್ ಸೋಂಕು ನಗರದಲ್ಲಿ ತೀವ್ರವಾಗಿ ಹರಡಿದ್ದು, ಇಸ್ಕಾನ್ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ, ಕೃಷ್ಣ ಜನ್ಮಾಷ್ಟಮಿಯಂದು ನಡೆಯಲಿರುವ ವಿಶೇಷ ಪೂಜೆಯನ್ನು ವೀಕ್ಷಿಸಲು ಆನ್‍ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News