ಫಾರ್ಮಾ-ಮೆಡಿಕಲ್ ಡಿವೈಸ್ ಪಾರ್ಕ್ ಅಭಿವೃದ್ಧಿಗಾಗಿ 13,600 ಕೋಟಿ ರೂ. ಹೂಡಿಕೆ: ಡಿ.ವಿ.ಸದಾನಂದ ಗೌಡ

Update: 2020-08-08 16:29 GMT

ಬೆಂಗಳೂರು, ಆ.8: ದೇಶದಲ್ಲಿ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕ್ ಗಳು ಹಾಗೂ ಮೂರು ಫಾರ್ಮಾ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಒಟ್ಟು 13,600 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ನಗರದ ಆರ್.ಆರ್.ಫಾರ್ಮಸಿ ಕಾಲೇಜ್ ಹಾಗೂ ರಾಜ್ಯ ನೋಂದಾಯಿತ ಔಷಧ ವ್ಯಾಪಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ‘ಭಾರತದ ಔಷಧಿ– ಜನೌಷಧಿ’ ಎಂಬ ವಿಷಯದ ಮೇಲೆ ನಡೆದ ವೆಬ್ಬಿನಾರ್ ನಲ್ಲಿ ಅವರು ಮುಖ್ಯ ಭಾಷಣ  ಮಾಡಿದರು.

‘ಭಾರತವು ಸದ್ಯ ಏಪಿಐ ಮತ್ತು ಕೆಎಸ್‍ಎಂಇ ಮೂಲ ರಾಸಾಯನಿಕಗಳಿಗಾಗಿ ಚೀನಾ ಮುಂತಾದ ವಿದೇಶಗಳ ಮೇಲೆ ಅವಲಂಬಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಮಗೆ ಈ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಕೊಟ್ಟಿದ್ದಾರೆ. ಈ ಹೊಸ ಪಾರ್ಕುಗಳ ಅಭಿವೃದ್ಧಿಯಿಂದ ಭಾರತವು ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಔಷಧ ಹಾಗೂ ವೈದ್ಯಕೀಯ ಉಪಕರಣ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಸಮಯದಲ್ಲಿಯೂ ಹೊಸದಾಗಿ 50 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯ ದೇಶದ 732 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯಡಿ (ಪಿಎಂಬಿಜೆಪಿ) 6500 ಜನೌಷಧಿ ಕೇಂದ್ರಗಳು ಕಾರ್ಯವಹಿಸುತ್ತಿವೆ. ಇನ್ನುಳಿದ ಎರಡು ಜಿಲ್ಲೆಗಳಲ್ಲಿಯೂ ಈ ತಿಂಗಳ ಒಳಗಾಗಿ ಜನೌಷಧಿ ಕೇಂದ್ರಗಳನ್ನು ತೆರೆಯುತ್ತೇವೆ. ಅಲ್ಲಿಗೆ ಭಾರತ ದೇಶದ ಎಲ್ಲ ಜಿಲ್ಲೆಗಳಿಗೂ ಜನೌಷಧಿ ಸೌಲಭ್ಯವನ್ನು ಒದಗಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಬ್ರಾಂಡೆಡ್ ಔಷಧಗಳಿಗಿಂತ ಶೇ.50ರಿಂದ 90ರಷ್ಟು ಕಡಿಮೆ ದರದಲ್ಲಿ ಜನರಿಗೆ ಗುಣಮಟ್ಟದ ಔಷಧಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಕೋಟ್ಯಂತರ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲು ಸಹಾಯವಾಗುತ್ತಿದೆ. ಇದು ಪ್ರಧಾನಿ ಮೋದಿಯ ಕನಸು ಹೌದು. ಕಡಿಮೆ ದರ ಇದೆ ಎಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಅಂತರ್ ರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಳ್ಳಲಾಗುತ್ತಿದೆ ಎಂದು ಸದಾನಂದಗೌಡ ಹೇಳಿದರು.

2019-20ರ ಸಾಲಿನಲ್ಲಿ ನಮ್ಮ ಜನೌಷಧ ಕೇಂದ್ರಗಳು 430 ಕೋಟಿ ರೂಪಾಯಿ ಔಷಧ ಮಾರಾಟ ಮಾಡಿವೆ. ಅಂದರೆ ಜನರಿಗೆ ಸುಮಾರು 2500 ಕೋಟಿ ರೂಪಾಯಿ ಉಳಿತಾಯ ಮಾಡಲಾಗಿದೆ. ಸುಮಾರು 750 ಮಾದರಿಯ ಔಷಧಗಳು ಹಾಗೂ 150 ಮಾದರಿಯ ವೈದ್ಯೋಪಕರಣಗಳು ನಮ್ಮಲ್ಲಿ ಲಭ್ಯವಿವೆ ಎಂದು ಅವರು ತಿಳಿಸಿದರು. ಕೊವಿಡ್ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿಯೂ ಜನೌಷಧ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಜನರಿಗೆ ಜನೌಷಧಗಳ ಮೂಲಕ ಸುಮಾರು 1260 ಕೋಟಿ ರೂಪಾಯಿ ಉಳಿತಾಯ ಮಾಡಲಾಗಿದೆ ಎಂದು ಅವರು ಹೇಳಿದರು.

ಒಂದು ಚಿಕ್ಕ ಉದಾಹರಣೆ ಹೇಳಬೇಕೆಂದರೆ ಕೇವಲ ಒಂದು ರೂಪಾಯಿಗೆ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ಒದಗಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಸ್ಯಾನಿಟರಿ ಪ್ಯಾಡ್‍ಗಳ ದರ ನಾಲ್ಕೈದು ಪಟ್ಟು ಜಾಸ್ತಿ ಎಂದು ಸದಾನಂದಗೌಡ ತಿಳಿಸಿದರು.

ಕರ್ನಾಟಕದಲ್ಲಿ ಸದ್ಯ 690 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಜನೌಷಧಿ ಕೆಂದ್ರಗಳನ್ನು ತೆರೆದು ಜನಸಾಮಾನ್ಯರಿಗೆ ಉಪಯೋಗ ಮಾಡಿಕೋಡಬೇಕೆಂದು ರಾಜ್ಯ ಸರಕಾರವನ್ನು ಕೇಳಿಕೊಂಡಿದ್ದೇವೆ ಎಂದು ಸದಾನಂದಗೌಡ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಕರ್ನಾಟಕದ ಜನ ಹೆಚ್ಚಿನ ಪ್ರಮಾಣದಲ್ಲಿ ಜನೌಷಧಿಯ ಸದುಪಯೋಗ ಮಾಡಿಕೊಂಡಿದ್ದಾರೆ.  ಕಳೆದ ನಾಲ್ಕು ತಿಂಗಳಲ್ಲಿ 42.8 ಕೋಟಿ ರೂ.ಮೌಲ್ಯದ ಜನೌಷಧಿ ಮಾರಾಟವಾಗಿದೆ. ಬ್ರಾಂಡೆಡ್ ಔಷಧಗಳ ಧರಕ್ಕೆ ಹೋಲಿಸಿದರೆ ರಾಜ್ಯದ ಜನಕ್ಕೆ ಅಂದಾಜು 250 ಕೋಟಿ ರೂ. ವರೆಗೆ ಉಳಿತಾಯವಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News