ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರದ ಮೊತ್ತ ಘೋಷಿಸಿದ ರಾಜ್ಯ ಸರಕಾರ

Update: 2020-08-08 16:34 GMT

ಬೆಂಗಳೂರು, ಆ.8: ಕೊರೋನ ಸೋಂಕಿನ ನಡುವೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿ ಸಾಕಷ್ಟು ಹಾನಿಯುಂಟಾಗಿರುವ ಹಿನ್ನೆಲೆ ರಾಜ್ಯ ಸರಕಾರ ಪರಿಹಾರ ಮೊತ್ತ ಘೋಷಿಸಿದೆ.

ಮಳೆ, ನೆರೆ ಹಾನಿಯಿಂದ ಮನೆಗಳಿಗೆ ನುಗ್ಗಿ ಹಾನಿಯುಂಟಾಗಿದ್ದು, ಮನೆ ಪುನರ್ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಪರಿಹಾರ ಮೊತ್ತ ಪ್ರಕಟಿಸಿದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 10 ಸಾವಿರ ರೂ., ಶೇ.75 ಕ್ಕಿಂತ ಹೆಚ್ಚು ಸಂಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದೆ.

ಅದೇ ರೀತಿ, ಶೇ.25 ರಿಂದ 75 ರಷ್ಟು ಹಾನಿಯಾದ ಮನೆಗಳನ್ನು ಹೊಸದಾಗಿ ಕೆಡವಿ ಕಟ್ಟಲು 5 ಲಕ್ಷ ರೂ, ಶೇ.25 ರಿಂದ 75ರಷ್ಟು ಹಾನಿಯಾದ ಮನೆಗಳ ದುರಸ್ತಿಗೆ 3 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇನ್ನು, ಶೇ.15 ರಿಂದ ಶೇ.25 ರಷ್ಟು ಅಲ್ಪ ಹಾನಿಯಾದ ಮನೆಗಳ ದುರಸ್ತಿಗೆ 50 ಸಾವಿರ ರೂ. ಪರಿಹಾರ ನೀಡಲು ರಾಜ್ಯ ಸರಕಾರ ಮುಂದಾಗಿದೆ.

ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಅಭಿವೃದ್ಧಿಪಡಿಸಲಾದ ತಂತ್ರಾಂಶದ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಮನೆ ಹಾನಿಯಾದ ಮಾಹಿತಿಯನ್ನು ವಸತಿ ಇಲಾಖೆಯ ವತಿಯಿಂದ ಹೊರಡಿಸಲಾಗುವ ಮಾರ್ಗಸೂಚಿಯನ್ವಯ ತಂತ್ರಾಂಶದಲ್ಲಿ ದಾಖಲಿಸುವುದಾಗಿ ರಾಜ್ಯ ಸರಕಾರದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News