ಉದ್ಯೋಗವಿಲ್ಲ, ಭರವಸೆ ಈಡೇರಿಲ್ಲ’: ಪ್ರತಿಭಟನೆಗೆ ಮುಂದಾದ ಕಾಶ್ಮೀರಿ ಪಂಡಿತ ಯುವಕರು

Update: 2020-08-08 17:38 GMT

ಜಮ್ಮುಕಾಶ್ಮೀರ, ಆ. 8: ಉಚ್ಚ ನ್ಯಾಯಾಲಯದ ಮಧ್ಯಸ್ಥಿಕೆ ಹೊರತಾಗಿಯೂ ಸರಕಾರಿ ಉದ್ಯೋಗಕ್ಕಾಗಿ ಅಂತ್ಯವಿಲ್ಲದ ಕಾಯುವಿಕೆಯನ್ನು ಎದುರಿಸಿದ ಬಳಿಕ ಕಾಶ್ಮೀರದ 400ಕ್ಕೂ ಅಧಿಕ ಹಿಂದೂ ಯುವಕರು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು india today ವರದಿ ಮಾಡಿದೆ.

ಹಲವು ವರ್ಷಗಳ ಕಾಯುವಿಕೆಯ ಬಳಿಕ ಪಂಡಿತ್ ಸಮುದಾಯ ಅಂತಿಮವಾಗಿ ಜಮ್ಮು ಹಾಗೂ ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನಿಯೋಜಿತರಾಗಿರುವ ಮನೋಜ್ ಸಿನ್ಹ ಅವರಿಂದ ರಾಜಕೀಯ ಬೆಂಬಲ ಸಿಗಬಹುದು ಎಂದು ಎದುರು ನೋಡುತ್ತಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿರುವ ಹಿಂದೂ (ವಲಸಿಗರಲ್ಲದವರು) ಗಳನ್ನು ಪ್ರತಿನಿಧಿಸುತ್ತಿರುವ ಜಮ್ಮು ಕಾಶ್ಮೀರ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್), ನಿರುದ್ಯೋಗ ನಿವಾರಿಸುವಲ್ಲಿ ಸರಕಾರ ಕೂಡಲೇ ಹಸ್ತಕ್ಷೇಪ ನಡೆಸಬೇಕು ಎಂದು ಆಗ್ರಹಿಸಿದೆ.

ಬೇಡಿಕೆ ಈಡೇರುವವ ವರೆಗೆ ಉಪವಾಸ ಮುಷ್ಕರ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

‘‘ನಾವು ಮಾನಸಿಕ ಕಿರುಕುಳ ಎದುರಿಸಿದ್ದೇವೆ. ಹಲವು ವರ್ಷಗಳಿಂದ ಅಧಿಕಾರಿಗಳ ನಿರ್ಲಕ್ಷ್ಯ, ಮುದುವರಿಯುತ್ತಿರುವ ಬಿಕ್ಕಟ್ಟು ಹಾಗೂ ಈಗಿನ ಲಾಕ್‌ಡೌನ್‌ನಿಂದ ಪಂಡಿತ್ ಯುವಕರು ತೀವ್ರ ಹತಾಶರಾಗಿದ್ದಾರೆ. 2019ರ ಉಚ್ಚ ನ್ಯಾಯಾಲಯದ ಅನುಮೋದನೆ ನೀಡಿದರೂ ಸರಕಾರಿ ಉದ್ಯೋಗಕ್ಕೆ ನೇಮಕಕ್ಕೆ ಸರಿ ಸಮಾರು 500 ಯುವಕರು ಈಗಲೂ ಕಾಯುತ್ತಿದ್ದಾರೆ’’ ಎಂದು ಕೆಪಿಎಸ್‌ಎಸ್‌ನ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸಂಜಯ್ ಟಿಕ್ಕೂ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಜೀವನ ಮುಂದುವರಿಸಿರುವ ಪಂಡಿತರು (ವಲಸಿಗರಲ್ಲದವರು) ನಡು ಹಾದಿಯಲ್ಲಿ ಇದ್ದಾರೆ. ಯಾವುದೇ ಹೊಸ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಈಗ ಉದ್ಯೋಗ ಕೂಡ ಒದಗಿಸುತ್ತಿಲ್ಲ. ನಮ್ಮ ಉಳಿವು ಅಪಾಯದಲ್ಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News