ಬೆಂಗಳೂರು: ಪ್ರವಾಹ ಭೀತಿ ಎದುರಿಸುತ್ತಿರುವ 209 ಪ್ರದೇಶಗಳನ್ನು ಗುರುತಿಸಿದ ಬಿಬಿಎಂಪಿ

Update: 2020-08-09 16:37 GMT

ಬೆಂಗಳೂರು, ಆ.9: ಸಿಲಿಕಾನ್ ಸಿಟಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಲವು ಸಂಕಷ್ಟಗಳಿಗೆ ಸಿಲುಕುತ್ತದೆ. ಈ ಸಲವೂ ಬಿಬಿಎಂಪಿಯು ಜೋರು ಮಳೆ ಬಿದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗುವ 209 ಪ್ರದೇಶಗಳನ್ನು ಗುರುತಿಸಿದೆ.

ಪ್ರತಿ ವರ್ಷವೂ ಮಳೆಯಿಂದ ಕೋಟ್ಯಂತರ ರೂ. ಆಸ್ತಿ-ಪಾಸ್ತಿ ನಷ್ಟವಾಗುತ್ತಿದೆ. ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಸಲದಂತೆ ಈ ಬಾರಿಯೂ ಮಳೆಯಿಂದ ಪ್ರವಾಹ ಉಂಟಾಗುವ 153 ಸೂಕ್ಷ್ಮ ಮತ್ತು 56 ಅತಿ ಸೂಕ್ಷ್ಮ ಪ್ರದೇಶಗಳನ್ನು ಬಿಬಿಎಂಪಿ ಗುರುತು ಮಾಡಿದೆ. ಈ ಪ್ರದೇಶಗಳಲ್ಲಿ ಮಳೆ ಹಾನಿ ತಡೆಗೆ ಅಗತ್ಯ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ಹೇಳುತ್ತಿದೆ. ಪ್ರವಾಹದ ಕುರಿತಂತೆ ಮುಂಚಿತವಾಗಿ ಮಾಹಿತಿ ಪಡೆಯಲು 28 ಕಡೆ ರಾಜಕಾಲುವೆಗಳಲ್ಲಿ ಸೆನ್ಸರ್‍ ಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲವಾಗಲಿದೆ.

ವಾಡಿಕೆಗಿಂತ ಶೇ65ರಷ್ಟು ಅಧಿಕ ಮಳೆ: ನಗರದಲ್ಲಿ ಜೂನ್ ಮತ್ತು ಜುಲೈನಲ್ಲಿ ವಾಡಿಕೆಯಂತೆ 185 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ವರ್ಷ ವಾಡಿಕೆಗಿಂತ ಶೇ 65ರಷ್ಟು ಅಧಿಕ ಮಳೆಯಾಗಿದೆ. ಆಗಸ್ಟ್ ನಲ್ಲಿ ಈವರೆಗೆ ವಾಡಿಕೆಗಿಂತ ಶೇ 28ರಷ್ಟು ಕಡಿಮೆ ಮಳೆ ಬಿದ್ದಿದೆ.

ಕೇಂದ್ರದಿಂದ ಪಾಲಿಕೆಗೆ 50 ಕೋಟಿ: ಸಿಟಿಯಲ್ಲಿ ಸ್ವಲ್ಪಮಟ್ಟಿಗೆ ಜೋರು ಮಳೆಯಾದರೆ ತಗ್ಗುಪ್ರದೇಶಗಳಲ್ಲಿನ ಬಡಾವಣೆಗಳು ಜಲಾವೃತಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಕಂದಾಯ ಇಲಾಖೆಯು ಪಾಲಿಕೆಗೆ 50 ಕೋಟಿ ರೂ. ಅನುದಾನ ನೀಡಿದೆ.

ನಗರದಲ್ಲಿ ಪ್ರತಿ ನಿಮಿಷ ಬೀಳುವ ಮಳೆಯ ಪ್ರಮಾಣ, ಯಾವ ಪ್ರದೇಶದಲ್ಲಿ ಹೆಚ್ಚು ಮಳೆಯಾಗಲಿದೆ, ಪ್ರವಾಹ ಭೀತಿ ಉಂಟಾಗಲಿದೆ ಎಂಬುದನ್ನು ತಿಳಿಯಲು ರೇಡಾರ್ ಗಳ ಅಳವಡಿಕೆಗೆ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಉಳಿದ 35 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಉಂಟಾಗುವ ಕಡೆ ಯೋಜನೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ.

ಮರ ತೆರವುಗೊಳಿಸುವ ವಾಹನಗಳಿಗೆ ಜಿಪಿಎಸ್: ಮಳೆ ಬಂದಾಗ ಬೀಳುವ ಮರಗಳು, ಮುರಿದು ಬೀಳುವ ರೆಂಬೆ-ಕೊಂಬೆಗಳ ತೆರವಿಗೆ ವಿಧಾನಸಭಾ ಕ್ಷೇತ್ರವಾರು 28 ತಂಡಗಳನ್ನು ನಿಯೋಜಿಸಲಾಗಿದೆ. ಮರಗಳು, ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಆ ವಾಹನಗಳ ಓಡಾಟದ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ.

ಯಾವುದೇ ಪ್ರದೇಶಗಳಿಂದ ದೂರುಗಳು ಬಂದರೂ ತಕ್ಷಣ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಪಾಲಿಕೆಯ 9 ಕಡೆ ಶಾಶ್ವತ ನಿಯಂತ್ರಣ ಕೊಠಡಿಗಳು ಮತ್ತು ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಮಳೆ ಅನಾಹುತಗಳನ್ನು ತಡೆಯುವ ಹೊಣೆ ಪಾಲಿಕೆಯ ವಲಯ ಮಟ್ಟದ ಇಂಜಿನಿಯರ್‍ ಗಳದ್ದಾಗಿದೆ. ಹಾಗಾಗಿ, ಅವರನ್ನು ಕೋವಿಡ್ ಕರ್ತವ್ಯಗಳಿಗೆ ನೇಮಕ ಮಾಡಿಲ್ಲ. ಅಲ್ಲದೆ, ಅಪಾಯಕಾರಿ ಸ್ಥಿತಿಯಲ್ಲಿರುವ ರೆಂಬೆಗಳನ್ನು ಮತ್ತು ಮಳೆ ಬಂದಾಗ ಬಿದ್ದ ಮರಗಳನ್ನು ತೆರವುಗೊಳಿಸುವ ತಂಡಗಳನ್ನು ಕೂಡ ಕೋವಿಡ್ ಕಾರ್ಯಕ್ಕೆ ಬಳಸಿಕೊಂಡಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಕ್ರಮ: ನಗರದಲ್ಲಿ 1400 ಕಿ.ಮೀ. ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿದ್ದು, ಇವುಗಳ ನಿರ್ವಹಣೆ ಹೊಣೆಯನ್ನು ಆಯಾ ವಲಯಗಳಿಗೆ ನೀಡಲಾಗಿತ್ತು. ಆದರೆ, ಪ್ರಮುಖ ರಸ್ತೆಗಳು ಎರಡು ವಲಯಗಳಿಗೆ ಬರುತ್ತಿದ್ದರಿಂದ ಮತ್ತೆ ನಿರ್ವಹಣೆಯನ್ನು ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News